ಇತ್ತೀಚಿನ ಸುದ್ದಿ

ರಾಮ ಮತ್ತು ರಾಮನ ಭಂಟ ಆಂಜನೇಯ ಮೊದಲು ಭೇಟಿಯಾಗಿದ್ದು ಎಲ್ಲಿ? ಇಲ್ಲಿ ರಾಮನ ಪಾದುಕೆಯೂ ಇದೆ

ಕೊಪ್ಪಳ, ಜ.06: ಅದೆಷ್ಟೋ ವರ್ಷಗಳ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷ ರಾಮನ ಭವ್ಯ ಮಂದಿರ ಸಿದ್ಧವಾಗುತ್ತಿದೆ. ಮತ್ತೊಂದೆಡೆ ಕರ್ನಾಟಕದಲ್ಲಿ ರಾಮನ ಪಾದ ಸ್ಪರ್ಶವಾದ ಅನೇಕ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿವೆ. ಇನ್ನು ರಾಮಾಯಣ ನೆನಪಿಸಿಕೊಂಡರೆ ಸಾಕು ತಕ್ಷಣ ನಮ್ಮ ಮನಸ್ಸಿಗೆ ಭಗವಾನ್‌ ಶ್ರೀರಾಮ ಮತ್ತು ಸೀತಾ ದೇವಿ ಜೊತೆಗೆ ರಾಮನ ಪರಮ ಭಂಟ ಹನುಮಂತ ಕೂಡ ಬರುತ್ತಾನೆ. ಶ್ರೀರಾಮನ ಸೇವೆಗಾಗಿ ಹನುಮಂತನು ಮಾಡಿದ ಲೀಲೆಗಳು ಒಂದಾ ಎರಡಾ? ಬನ್ನಿ ರಾಮ ಮತ್ತು ರಾಮನ ಭಂಟ ಆಂಜನೇಯ ಮೊದಲು ಭೇಟಿಯಾಗಿದ್ದು ಎಲ್ಲಿ? ಈ ಸ್ಥಳದ ವಿಶೇಷತೆ ಬಗ್ಗೆ ಇಲ್ಲಿ ತಿಳಿಯಿರಿ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು ಕರ್ನಾಟಕದಲ್ಲಿ ಹನುಮಂತ ಜನ್ಮ ಸ್ಥಳವಿರುವುದು ರಾಜ್ಯಕ್ಕೆ ಹೆಮ್ಮೆ ಹೆಚ್ಚಿಸಿದೆ. ಜೊತೆಗೆ ರಾಮ ಮತ್ತು ಹನುಮಂತ ಮೊದಲ ಬಾರಿಗೆ ಭೇಟಿಯಾಗಿದ್ದು ಕೂಡ ಕರ್ನಾಟಕದಲ್ಲೇ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿ ದಡದಲ್ಲಿರುವ ಚಂಚಲಕೋಟೆಯಲ್ಲಿದೆ ಈ ಐತಿಹಾಸಿಕ ಸ್ಥಳ. ವಾಲಿಯ ಭಯದಿಂದ ಸುಗ್ರೀವ ಮತ್ತು ಆಂಜನೇಯ ಚಂಚಲಕೋಟೆಯಲ್ಲಿ ಅಡಗಿಕೊಂಡಿರುತ್ತಾರೆ. ಇದೇ ಸಮಯದಲ್ಲಿ ಸೀತೆಯನ್ನು ಹುಡುಕಿಕೊಂಡು ರಾಮ ಲಕ್ಷ್ಮಣರು ಹೋಗುತ್ತಿರುತ್ತಾರೆ. ಚಂಚಲಕೋಟೆಯಲ್ಲಿದ್ದ ಆಂಜನೇಯ ಮತ್ತು ಸುಗ್ರೀವರಿಬ್ಬರೂ ರಾಮ ಲಕ್ಷ್ಮಣರನ್ನು ನೋಡುತ್ತಾರೆ. ವಾಲಿಯ ಬಂಟರೇ ಬಂದಿರಬಹುದು ಅಂತ ಆಂಜನೇಯ ಮತ್ತು ಸುಗ್ರೀವ ಭಯ ಪಡುತ್ತಾರೆ. ಆದರೆ ತಾವು ರಾಮ ಲಕ್ಷ್ಮಣರು, ಸೀತೆಯನ್ನು ಹುಡುಕಿಕೊಂಡು ಹೋಗುತ್ತಿರುವುದಾಗಿ ಆಂಜನೇಯ ಮತ್ತು ಸುಗ್ರೀವಗೆ ಹೇಳುತ್ತಾರೆ. ಇದೇ ಚಂಚಲಕೋಟೆಯಲ್ಲಿ ರಾಮ ಮತ್ತು ಆಂಜನೇಯರ ಭೇಟಿಯಾಗುತ್ತದೆ.

ರಾಮ ಮತ್ತು ಆಂಜನೇಯರ ಮೊದಲು ಭೇಟಿಯಾಗಿದ್ದು ಇದೇ ತುಂಗಭದ್ರಾ ದಡದಲ್ಲಿರುವ ಚಂಚಲಕೋಟೆಯಲ್ಲಿ. ಈ ಸ್ಥಳದಲ್ಲಿ ರಾಮನ ಪಾದುಕೆಗಳು ಕೂಡಾ ಇವೆ. ಕಲ್ಲಿನ ಬಂಡೆ ಮೇಲೆ ರಾಮನ ಪಾದುಕೆಗಳಿವೆ.

Related Articles

Leave a Reply

Your email address will not be published. Required fields are marked *

Back to top button