ದೇಶ

ನಕ್ಸಲ್ ಸಮಸ್ಯೆಗೆ ವರ್ಷದೊಳಗೆ ಶಾಶ್ವತ ಪರಿಹಾರಕ್ಕೆ ಒತ್ತು ನೀಡಿ: ಅಮಿತ್ ಶಾ ಸಲಹೆ

ನವದೆಹಲಿ : ನಕ್ಸಲ್ ಸಮಸ್ಯೆಯನ್ನು ವರ್ಷದೊಳಗೆ ನಿರ್ಮೂಲನೆ ಮಾಡಲು ನಕ್ಸಲ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳು ಒತ್ತು ನೀಡಬೇಕು. ಅಲ್ಲದೆ ನಕ್ಸಲರಿಗೆ ಸಿಗುತ್ತಿರುವ ಹಣಕಾಸಿನ ನೆರವಿನ ಮೂಲವನ್ನು ತಡೆಯಲು ಜಂಟಿ ಕಾರ್ಯತಂತ್ರ ರೂಪಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದರು.

ನಕ್ಸಲ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಮಾವೋವಾದಿಗಳ ವಿರುದ್ಧದ ಹೋರಾಟವು ಈಗ ಅಂತಿಮ ಹಂತ ತಲುಪಿದೆ. ಹೀಗಾಗಿ ಅದನ್ನು ಇನ್ನಷ್ಟು ಚುರುಕುಗೊಳಿಸಿ, ನಿರ್ಣಾಯಕವಾಗಿಸಬೇಕು ಎಂದು ಕರೆ ನೀಡಿದರು.
ಮುಖ್ಯಮಂತ್ರಿಗಳಾದ ನವೀನ್ ಪಟ್ನಾಯಕ್ (ಒಡಿಶಾ), ಕೆ.ಚಂದ್ರಶೇಖರ ರಾವ್ (ತೆಲಂಗಾಣ), ನಿತೀಶ್ ಕುಮಾರ್ (ಬಿಹಾರ), ಶಿವರಾಜ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ಉದ್ಧವ್ ಠಾಕ್ರೆ (ಮಹಾರಾಷ್ಟ್ರ), ಹೇಮಂತ್ ಸೊರೆನ್ (ಜಾರ್ಖಂಡ್) ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಶ್ಚಿಮ ಬಂಗಾಳ, ಛತ್ತೀಸಗಡ, ಆಂಧ್ರಪ್ರದೇಶ ಮತ್ತು ಕೇರಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿತ್ತು. ಇವರ ಬದಲಾಗಿ ಆ ರಾಜ್ಯಗಳ ಸಚಿವರು ಅಥವಾ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಕ್ಸಲ್ ಸಮಸ್ಯೆಗೆ ವರ್ಷದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳೂವ ನಿಟ್ಟಿನಲ್ಲಿ ಎಲ್ಲ ಸಿ.ಎಂಗಳು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. ನಕ್ಸಲ್ ಬಾಧಿತ ರಾಜ್ಯಗಳಲ್ಲಿ ಇರುವ ಭದ್ರತಾ ಪರಿಸ್ಥಿತಿ, ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆ, ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಚಟುವಟಿಕೆಗಳ ಕುರಿತು ಕೇಂದ್ರ ಸಚಿವರು ಚರ್ಚಿಸಿದರು.
ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶದ ಪ್ರಕಾರ, ಮಾವೋವಾದಿಗಳಿಂದ ಹಿಂಸಾಕೃತ್ಯ ಘಟನೆಗಳು ಗಣನೀಯವಾಗಿ ಕಡಿಮೆಯಾಗಿವೆ. ಸದ್ಯ 45 ಜಿಲ್ಲೆಗಳಿಗೆ ಇವರ ಚಟುವಟಿಕೆ ಸೀಮಿತವಾಗಿದೆ. ಆದರೂ, 90 ಜಿಲ್ಲೆಗಳನ್ನು ಬಾಧಿತ ಪ್ರದೇಶಗಳು ಎಂದು ಕೇಂದ್ರ ಗುರುತಿಸಿದ್ದು, ಭದ್ರತೆಗೆ ಸಂಬಂಧಿಸಿದ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ನಕ್ಸಲ್ ಬಾಧಿತ ಜಿಲ್ಲೆಗಳಲ್ಲಿ ನಡೆದ ಹಿಂಸಾಕೃತ್ಯಗಳಲ್ಲಿ 2015ರಿಂದ 2020ರ ಅವಧಿಯಲ್ಲಿ 380 ಭದ್ರತಾ ಸಿಬ್ಬಂದಿ, 1000 ನಾಗರಿಕರು ಮತ್ತು 900 ಮಂದಿ ನಕ್ಸಲರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 4,200 ನಕ್ಸಲರು ಶರಣಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button