ಆರ್ಕಿಟೆಕ್ಚರ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಈ ವಿಷಯಗಳನ್ನು ಅಭ್ಯಾಸ ಮಾಡಿರುವುದು ಕಡ್ಡಾಯವಲ್ಲ!ಎಐಸಿಟಿಇ
12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಗಣಿತವನ್ನು ಅಧ್ಯಯನ ಮಾಡದೆ ಇರುವವರೂ ಕೂಡ ಪದವಿಯಲ್ಲಿ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪ್ರೋಗ್ರಾಂ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು ಎಂದು ಕಳೆದವರ್ಷ ಎಐಸಿಟಿಇ ಹೇಳಿತ್ತು. ಅದೇ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅನೇಕರು ವಿರೋಧವನ್ನೂ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪ್ರಸಕ್ತ ಸಾಲಿನಲ್ಲೂ ಕೆಲವು ಕೋರ್ಸ್ಗಳಿಗೆ ಪಿಸಿಎಂನಿಂದ ವಿನಾಯಿತಿ ನೀಡಲಾಗಿದೆ. ಆರ್ಕಿಟೆಕ್ಚರ್ ಕೋರ್ಸ್ ಮಾತ್ರವಲ್ಲ ಜತೆಗೆ ಫ್ಯಾಷನ್ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ಕೋರ್ಸ್ಗಳ ಪ್ರವೇಶಕ್ಕೂ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಅಭ್ಯಾಸ ಮಾಡಿರುವುದು ಕಡ್ಡಾಯವಲ್ಲ ಎಂದು ಹೇಳಿದೆ.
ಯಾವ ಪದವಿಗಳಿಗೆ ಪಿಸಿಎಂ ಕಡ್ಡಾಯ ಮಾಡಬಹುದು ಮತ್ತು ಐಚ್ಛಿಕ ಮಾಡಬಹುದು ಎಂಬುದನ್ನು ಪರಿಶೀಲನೆ ಮಾಡಲು ನಾವು ಒಂದು ತಜ್ಞರ ಸಮಿತಿ ರಚನೆ ಮಾಡಿದ್ದೇವೆ. ಈ ಸಮಿತಿಯ ಶಿಫಾರಸ್ಸಿನ ಅನ್ವಯ ಮೂರು ಕೋರ್ಸ್ಗಳಿಗೆ ಪಿಸಿಐ ಐಚ್ಛಿಕ ಮಾಡಲಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುಧೆ ತಿಳಿಸಿದ್ದಾರೆ. ಆರ್ಕಿಟೆಕ್ಚರ್, ಫ್ಯಾಷನ್ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ಕೋರ್ಸ್ಗಳಿಗೆ ಪಿಸಿಎಂ ಕಡ್ಡಾಯವಲ್ಲ. ಹಾಗಂತ ಅದನ್ನು ಮಾಡಿದವರಿಗೂ ಪ್ರವೇಶ ಸಿಗುತ್ತದೆ. ಇವುಗಳನ್ನು ಹೊರತು ಪಡಿಸಿ ಯಾವೆಲ್ಲ ವಿಷಯ ಅಧ್ಯಯನ ಮಾಡಿದವರಿಗೆ ಈ ಮೂರು ಕೋರ್ಸ್ಗಳಿಗೆ ಪ್ರವೇಶ ಸಿಗಲಿದೆ ಎಂಬುದನ್ನು ಎಐಸಿಟಿಇ ತಿಳಿಸಿದ್ದು ಅವು ಹೀಗಿವೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ, ಬಯಾಲಜಿ, ಇನ್ಫಾರ್ಮೇಟಿಕ್ ಪ್ರ್ಯಾಕ್ಟೀಸ್, ಬಯೋಟೆಕ್ನಾಲಜಿ, ತಾಂತ್ರಿಕ ವೃತ್ತಿಪರ ವಿಷಯ, ಎಂಜಿನಿಯರಿಂಗ್ ಗ್ರಾಫಿಕ್ಸ್, ವ್ಯಾಪಾರ ಅಧ್ಯಯನಗಳು ಮತ್ತು ಉದ್ಯಮಶೀಲತೆ. ಈ ವಿಷಯಗಳಲ್ಲಿ ಯಾವುದೇ ಮೂರು ವಿಷಯಗಳ ಅಧ್ಯಯನ ಮಾಡಿದವರು ಆರ್ಕಿಟೆಕ್ಚರ್, ಫ್ಯಾಷನ್ ಟೆಕ್ನಾಲಜಿ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿಗೆ ಪ್ರವೇಶ ಪಡೆಯಬಹುದು.