ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಗ್ರಾಮ ಪಂಚಾಯಿತಿಯಿಂದ, ತಾಲ್ಲೂಕು ಕಛೇರಿಯವರಿಗೆ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ:ಕೆ.ಎಸ್. ಮಂಜುನಾಥ್ ಗೌಡ

ನೀನು ಮಾಡಿರುವ ಭ್ರಷ್ಟಾಚಾರಕ್ಕೆ “ಕಾಂಗ್ರೆಸ್ ಎಂಬ ವೆಂಟಿಲೇಟರ್” ನಲ್ಲಿ ಇರುವುದರಿಂದ ಇನ್ನೂ ಉಳಿದಿರುವೆ ಕಾಂಗ್ರೆಸ್ ಇಲ್ಲವಾದರೆ ನೀನು ಉಳಿಯುವುದಿಲ್ಲ. ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅವರು ಹಾಲಿ ಶಾಸಕ ಕೆ.ವೈ. ನಂಜೇಗೌಡ ಅವರ ವಿರುದ್ದ ಏಕವಚನದಲ್ಲೇ ಕಟುವಾಗಿ ಕಿಡಿಕಾರಿದರು.
ಪಟ್ಟಣದ ಟಿ.ಬಿ. ಕೃಷ್ಣಪ್ಪ ಲೇಔಟ್ ನಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಸೇವಾ ಪಾಕ್ಷಿಕ ಕಾರ್ಯಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಗ್ರಾಮ ಪಂಚಾಯಿತಿ ಇಂದ ತಾಲ್ಲೂಕು ಕಛೇರಿಯವರಿಗೆ ಜನಸಾಮಾನ್ಯರ ಕೆಲಸ ಆಗುತ್ತಿಲ್ಲ. ಯಾಕೆಂದರೆ ಅಧಿಕಾರಿಗಳ ಹತ್ತಿರ ಜನಪ್ರತಿನಿಧಿಯಾದವರು ತಿಂಗಳಿಗೆ ಇಂತಿಷ್ಟು ಅಂತ ಹಣ ನಿಗದಿಪಡಿಸುವುದರಿಂದ ಅಧಿಕಾರಿಗಳು ಜನಸಾಮಾನ್ಯರ ಮೇಲೆ ಬಿದ್ದಿದ್ದಾರೆ. ಜನರು ತಮ್ಮ ಸೇವೆಗಾಗಿ ಶಾಸಕರಾಗಿ ಆಯ್ಕೆ ಮಾಡಿದರೆ ಒಂದು ದಿನವಾದರೂ ಜನರ ಹಾಗೂ ತಾಲ್ಲೂಕಿನ ಅಭಿವೃದ್ಧಿಗೆ ಯೋಚಿಸದೆ ದುಡ್ಡು ಮಾಡುವ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆ. ಕಳೆದ ಚುನಾವಣೆ ಫಲಿತಾಂಶದ ಮೇಲೆ ನಮಗೆ ಅನುಮಾನವಿದ್ದು ಮರು ಎಣಿಕೆಗೆ ನ್ಯಾಯಾಲದ ಮೊರೆ ಹೋಗಿದ್ದು ಇಂದು ನ್ಯಾಯಾಲಯವು ಮರು ಎಣಿಕೆಗೆ ಆದೇಶ ನೀಡಿದೆ ಇದರಿಂದಾಗಿ ಕುಪಿತಗೊಂಡ ಶಾಸಕರು ನಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿ ನಮ್ಮ ಕಾರ್ಯಕರ್ತರನ್ನು ಹಾಗೂ ನಮ್ಮನ್ನು ಹುಚ್ಚರೆಂದು ಹೇಳಿದ್ದಾರೆ.
ಮರು ಎಣಿಕೆ ಮಾಡಲೆಂದು ನ್ಯಾಯಾಲಯ ಮೊರೆ ಹೋಗಿರುವುದೇ ತಪ್ಪಾದ ರೀತಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಭ್ರಷ್ಟಾಚಾರಕ್ಕೆ ಜನರೇ ಸರಿಯಾದ ಉತ್ತರ ನೀಡುತ್ತಾರೆ ಎಂದು ಸುಮ್ಮನಿದ್ದ ನಮಗೆ ಪದೇ ಪದೇ ಏಕವಚನದಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಮಾತನಾಡಿದರೆ ನಾನು ಸ್ಥಳೀಕ, ಮಾಲೂರಿನವನು ಹೇಳುವ ಇವರು ಹಾಲು ಒಕ್ಕೂಟದಲ್ಲಿ ಕೆಲಸ ನೀಡಲು ಇದೇ ಮಾಲೂರಿನವರ ಹತ್ತಿರ ಲಂಚ ತೆಗೆದುಕೊಂಡಿದ್ದಾರೆ. ಕಾರ್ಖಾನೆಗಳ ಹತ್ತಿರ, ಗ್ರಾಮ ಪಂಚಾಯಿತಿ ಇಂದ ತಾಲ್ಲೂಕು ಕಛೇರಿಯವರೆಗೆ ತಿಂಗಳಿಗೆ ಇಷ್ಟು ಎಂದು ವಸೂಲಿ ಮಾಡಿಸುತ್ತಿದ್ದಾರೆ. ಅದಲ್ಲದೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಭ್ರಷ್ಟಾಚಾರ ನಡೆದು ಇವರ ಮೇಲೆ ಇಡಿ ದಾಳಿಯಾದರು. ಇವರು ಮಾಡಿರುವ ಭ್ರಷ್ಟಾಚಾರ ಗೊತ್ತಿದ್ದರು ರಾಜ್ಯ ಸರ್ಕಾರ ಇವರ ರಕ್ಷಣೆ ನಿಂತಿದೆ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಟಿಬಿ ಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿಗೌಡ ಕೃಷ್ಣಾರೆಡ್ಡಿ, ಅಲ್ಪಸಂಖ್ಯಾತರ ಮುಖಂಡ ಅಜ್ಗರ್, ಕೂರಂಡಹಳ್ಳಿ ರಾಜಪ್ಪ, ಬೆಳ್ಳಾವಿ ಸೋಮಣ್ಣ, ಪುರಸಭೆ ಸದಸ್ಯ ವೇಮನ, ತಬಲ ಅಪ್ಪಿ, ಪುರಸಭಾ ಸದಸ್ಯ ಮುನಿರಾಜು, ಅನಿತಾ ನಾಗರಾಜ್, ಮಡಿವಾಳ ಚಂದ್ರಶೇಖರ್, ಮೂರ್ತಿ ಓಜಾರಹಳ್ಳಿ ಮುನಿಯಪ್ಪ ಸೇರಿದಂತೆ ಇನ್ನಿತರರು ಇದ್ದರು.


