
ಚಾಮರಾಜನಗರ. ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಸುರಕ್ಷಾ ಸಮೃದ್ಧಿ ಫೌಂಡೇಶನ್ ವತಿಯಿಂದ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ಈ ವೇಳೆ ಸುರಕ್ಷಾ ಸಮೃದ್ಧಿ ಫೌಂಡೇಶನ್ ನ ಅಧ್ಯಕ್ಷರಾದ ಮಧು ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ತುಂಬಾ ಸಿರಿವಂತರು ಮಾನಸಿಕ ಆರೋಗ್ಯ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಕೆಲವರು ಬಹುಬೇಗ ಒತ್ತಡಕ್ಕೆ ಒಳಗಾಗುತ್ತಾರೆ,
ಜನ ಸಾಮಾನ್ಯರು ಮಾನಸಿಕ ರೋಗ ಎಂದರೆ ದೊಡ್ಡ ವಿಚಾರವೆಂದು ತಿಳಿಯುತ್ತಾರೆ, ಮಾನಸಿಕ ವೈದ್ಯರನ್ನು ಭೇಟಿ ಮಾಡಿದರೆ ಹುಚ್ಚರು ಎಂಬ ಪಟ್ಟ ಬರುತ್ತದೆ ಎಂಬ ಆಲೋಚನೆಯನ್ನು ತೆಗೆದು ಹಾಕಬೇಕಿದೆ. ಈ ವಿಚಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಬೇಕಿದೆ ಎಂದರು.
ಮನೋವಿಜ್ಞಾನಿ ಸಂಜಯ್ ರವರು ಮಾತನಾಡಿ ಮಕ್ಕಳಲ್ಲಿನ ಕೆಲವು ನಡವಳಿಕೆಯ ಪ್ರವೃತ್ತಿಗಳು ಮಾನಸಿಕ ಆರೋಗ್ಯ ಸಮಸ್ಯೆಗಳ – ಬೆದರಿಸುವಿಕೆ, ಸಾಮಾಜಿಕ ಪ್ರತ್ಯೇಕತೆ, ಮಾದಕ ದ್ರವ್ಯ ಸೇವನೆ, ಸ್ವಯಂ ಹಾನಿ, ಒತ್ತಡ, ಖಿನ್ನತೆ, ಆತಂಕ ಮತ್ತು ಆತ್ಮಹತ್ಯಾ ಪ್ರವೃತ್ತಿಗಳ – ಮೂಲ ಲಕ್ಷಣಗಳಾಗಿವೆ ಎಂಬುದು ಎಲ್ಲರಿಗೂ ತಿಳಿದಿದೆ,
ಆರೋಗ್ಯದಲ್ಲಿ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎಂಬ ಎರಡು ಭಾಗಗಳಿರುತ್ತದೆ, ದೈಹಿಕ ಆರೋಗ್ಯದಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳಿರುತ್ತವೆ. ಅದಕ್ಕೆ ನಾವು ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಂಡು ಆರೋಗ್ಯ ಚೇತರಿಸಿಕೊಂಡು ದಿನ ನಿತ್ಯದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ಮಾನಸಿಕ ಆರೋಗ್ಯದ ಕುರಿತು ಅರಿವಿನ ಕೊರತೆಯಿಂದಾಗಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಿ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೂಳಿಪುರ ಗ್ರಾಮ ಪಂಚಾಯತಿ ಸದಸ್ಯರಾದ ಶಂಕರಪ್ಪ, ಸದಸ್ಯರಾದ ಗಿರೀಶ್, ಮಾಜಿ ಸದಸ್ಯರಾದ ಬಿ.ಕೆ.ರಾಜು, ಅಖಿಲ ಭಾರತ ವೀರಶೈವ ಸಂಘದ ಜಿಲ್ಲಾಧ್ಯಕ್ಷ ಮೂಡಲಪುರ ನಂದೀಶ್, ದಾಸನೂರು ಗ್ರಾಮ ಪಂಚಾಯತಿ ಸದಸ್ಯರಾದ ಸಣ್ಣಕ್ಕಿ ಗೌಡರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಿ. ಎಂ. ಮಹೇಂದ್ರ ಕುಮಾರ್, ಹೆಲ್ಪ್ ಏಜ್ ಇಂಡಿಯಾದ ಜಿಲ್ಲಾ ಸಂಚಾಲಕರಾದ ಪ್ರಕಾಶ್. ಎಂ, ರಕ್ಷಾ ಸಮೃದ್ಧಿ ಫೌಂಡೇಶನ್ ನ ಕೋಶಾಧಿಕಾರಿ ಸಾಜಿದಾ ಅಬ್ದುಲ್ ಹಮೀದ್, ಕಾರ್ಯನಿರ್ವಾಹಕ ನಿರ್ದೇಶಕರಾದ ಅಬ್ದುಲ್ ಹಮೀದ್ ಜೋಕಟ್ಟೆ, ಯೋಜನಾ ನಿರ್ದೇಶಕರಾದ ರಾಜು. ಜಿ.ಎಂ, ಜ್ಯೋತಿ ಸೇರಿದಂತೆ ಬೂದಂಬಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಹಾಜರಿದ್ದರು.


