ಸಾಮೂಹಿಕ ಗುಂಡಿನ ದಾಳಿ ಕುರಿತು ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸುತ್ತಿದ್ದಾಗಲೇ ಗುಂಡು ಹಾರಿಸಿ ಟ್ರಂಪ್ ಸ್ನೇಹಿತನ ಹತ್ಯೆ!

ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಮೆರಿಕದ ಕರ್ನರ್ವೇಟಿವ್ ಕಾರ್ಯಕರ್ತ ಹಾಗು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ನೇಹಿತ ಚಾರ್ಲಿ ಕಿರ್ಕ್(31) ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡು ಕುತ್ತಿಗೆ ಸೀಳಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ವರದಿಯಾಗಿದೆ.
ಕಿರ್ಕ್ ಅವರಿಗಾಗಿ ಪ್ರಾರ್ಥಿಸಿ – ಟ್ರಂಪ್: ಕಿರ್ಕ್ ಹತ್ಯೆಯನ್ನು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. “ಕಿರ್ಕ್ ಎಲ್ಲರಿಂದಲೂ ಪ್ರೀತಿಸಲ್ಪಟ್ಟವರು ಮತ್ತು ಮೆಚ್ಚುಗೆ ಗಳಿಸಿದವರು. ಅವರಿಗಾಗಿ ಎಲ್ಲರೂ ಪ್ರಾರ್ಥಿಸೋಣ” ಎಂದು ಸಾಮಾಜಿಕ ಜಾಲತಾಣ ಟ್ರೂತ್‌ನಲ್ಲಿ ಮನವಿ ಮಾಡಿದ್ದಾರೆ.
“ದಂತಕಥೆ ಚಾರ್ಲಿ ಕಿರ್ಕ್ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಚಾರ್ಲಿಗಿಂತ ಉತ್ತಮವಾಗಿ ಯಾರೂ ನಮ್ಮ ಯುವಕರ ಹೃದಯವನ್ನು ಅರ್ಥಮಾಡಿಕೊಂಡವರಿಲ್ಲ. ಅವರನ್ನು ಎಲ್ಲರೂ ಅದರಲ್ಲೂ ವಿಶೇಷವಾಗಿ ನಾನು ಹೆಚ್ಚು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚಿಕೊಂಡಿದ್ದೆ. ಈಗ ಅವರು ನಮ್ಮೊಂದಿಗಿಲ್ಲ. ಪತ್ನಿ ಮೆಲಾನಿಯಾ ಮತ್ತು ನನ್ನ ಸಹಾನುಭೂತಿ ಕಿರ್ಕ್ ಅವರ ಪತ್ನಿ ಎರಿಕಾ ಮತ್ತು ಕುಟುಂಬದೊಂದಿಗೆ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಕಿರ್ಕ್ ಗೌರವಾರ್ಥವಾಗಿ ಅಮೆರಿಕದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸುವಂತೆಯೂ ಅವರು ಆದೇಶಿಸಿದ್ದಾರೆ.
ತನಿಖಾಧಿಕಾರಿಗಳು ಕೃತ್ಯ ಎಸಗಿದ ದುಷ್ಕರ್ಮಿಗಾಗಿ ಶೋಧ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಶಂಕಿತ ವ್ಯಕ್ತಿಯನ್ನು ಬಂಧಿಸಿಲ್ಲ, ತನಿಖೆ ಸಾಗುತ್ತಿದೆ ಎಂದು ಉತಾಹ್ ವಿಶ್ವವಿದ್ಯಾಲಯದ ವಕ್ತಾರೆ ಎಲೆನ್ ಟ್ರೆನರ್ ತಿಳಿಸಿದ್ದಾರೆ.
ಓರೆಮ್ ಪೊಲೀಸ್ ಇಲಾಖೆ, ಉತಾಹ್ ವ್ಯಾಲಿ ವಿಶ್ವವಿದ್ಯಾಲಯ ಪೊಲೀಸ್, ಎಫ್‌ಬಿಐ ಮತ್ತು ಉತಾಹ್ ಸಾರ್ವಜನಿಕ ಸುರಕ್ಷತಾ ಇಲಾಖೆಯೂ ಸೇರಿದಂತೆ ಹಲವು ಸಂಸ್ಥೆಗಳು ತನಿಖೆಯಲ್ಲಿ ತೊಡಗಿವೆ.
ಈ ಘಟನೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಚಾರ್ಲಿ ಅವರ ಪ್ರೀತಿಪಾತ್ರರು ಮತ್ತು ಬಾಧಿತ ಪ್ರತಿಯೊಬ್ಬರೊಂದಿಗೂ ನಮ್ಮ ಆಲೋಚನೆಗಳಿವೆ. ನಮ್ಮ ಸಿಬ್ಬಂದಿ ಆದಷ್ಟು ಬೇಗ ಸ್ಥಳಕ್ಕೆ ಆಗಮಿಸುತ್ತಾರೆ. ಮುಂದಿನ ಪ್ರತಿಕ್ರಿಯೆ ಮತ್ತು ತನಿಖೆಗೆ ಎಫ್‌ಬಿಐ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಿರ್ಕ್ ಅವರು ಮಿಲಿಯನ್ ಡಾಲರ್ ಮಾಧ್ಯಮ ಜಗತ್ತಿನ ಮಾಲೀಕರಾಗಿದ್ದರು. ಇವರು ಹೊಂದಿರುವ ಸಂಪತ್ತಿನ ಅಂದಾಜು ಮೌಲ್ಯ 12 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ವಿಶೇಷ ಶೋಗಳು, ರಿಯಲ್ ಎಸ್ಟೇಟ್ ಉದ್ಯಮಗಳು ಹಾಗು ಇತರೆ ಮೂಲಗಳಿಂದ ಅವರು ಈ ಸಂಪತ್ತು ಗಳಿಸಿರುವುದಾಗಿ ವರದಿಯಾಗಿದೆ.
ಅಮೆರಿಕದಲ್ಲಿ ಗನ್ ಸಂಸ್ಕೃತಿ ಕಳವಳ: ಈ ಗುಂಡಿನ ದಾಳಿ ಅಮೆರಿಕವನ್ನು ಮತ್ತೆ ಬೆಚ್ಚಿ ಬೀಳಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಬಂದೂಕು ದಾಳಿ ಸಂಸ್ಕೃತಿ ಕಳವಳ ಹುಟ್ಟುಹಾಕಿದೆ. ರಾಜಕೀಯ ಹಿಂಸಾಚಾರಗಳಿಗೆ ಇದೊಂದು ಮತ್ತೊಂದು ಸಾಕ್ಷ್ಯಿ ಎಂದು ಹೇಳಲಾಗುತ್ತಿದೆ.

