
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಪ್ರಕರಣಗಳು ತನಿಖೆಗೆ ‘ಸೈಬರ್ ಕಮಾಂಡ್ ಸೆಂಟರ್’ ಹೆಸರಿನ ಸ್ವತಂತ್ರ ತನಿಖಾ ಘಟಕ ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಹೈಕೋರ್ಟ್, ಈ ಘಟಕವು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತಾಗಬೇಕು ಎಂದು ಸಲಹೆ ನೀಡಿದೆ.
ನ್ಯೂಸ್ಪೇಸ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ಸಂಬಂಧ ಡ್ರೋನ್ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ಕುರಿತು ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚನೆ ಮಾಡಲು ಹೈಕೋರ್ಟ್ 2025ರ ಏಪ್ರಿಲ್ನಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಜಾರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ, ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದೇಶದೆಲ್ಲೆಡೆ ನಡೆಯುತ್ತಿದೆ. ಸೈಬರ್ ಅಪರಾಧಗಳ ತನಿಖೆಗೆ ‘ಸೈಬರ್ ಕಮಾಂಡ್ ಸೆಂಟರ್’ ಹೆಸರಿನ ಸ್ವತಂತ್ರ ತನಿಖಾ ಘಟಕ ಸ್ಥಾಪನೆ ಮಾಡಲು ಹೈಕೋರ್ಟ್ ಸೂಚಿಸಿತ್ತು.
ಸಿಸಿಸಿ ಅಧಿಕಾರಶಾಹಿಯ ಕಟ್ಟಡವಾಗಿರಬಾರದು: ಇದರಿಂದ ಮಾದಕ ವಸ್ತು ಮತ್ತು ಸೈಬರ್ ಪ್ರಕರಣಗಳ ತನಿಖೆಯನ್ನು ಸಿಐಡಿ ವ್ಯಾಪ್ತಿಯನ್ನು ಸಿಸಿಸಿಗೆ ವ್ಯಾಪ್ತಿಗೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ಸ್ವಾಗತಿಸಿರುವ ಹೈಕೋರ್ಟ್, ಸಿಸಿಸಿ ಸ್ಥಾಪನೆ ಮಾಡಿದರೆ ಸಾಕಾಗುವುದಿಲ್ಲ. ಈ ಕೇಂದ್ರವು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಆದರೆ ಅದು ನಿಷ್ಕ್ರಿಯವಾಗಿ ಉಳಿದರೆ, ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆಯುವ ಕೆಲಸವು ಕೇವಲ ಕಾಗದದ ಉಳಿಯುತ್ತದೆ. ಮೇಲಾಗಿ ಸಿಸಿಸಿಯು ಅಧಿಕಾರಶಾಹಿಯ ಕಟ್ಟಡವಾಗಿರಬಾರದು. ಬದಲಾಗಿ ಒಂದು ಮಾದರಿ ಬದಲಾವಣೆಯಾಗಿರಬೇಕು. ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ದಾರಿದೀಪವಾಗಬೇಕು. ಸಿಸಿಸಿಗೆ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಿದರೆ, ಹೊಸ ಯುಗದ ಅಪರಾಧಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಸಿಸಿಸಿಯನ್ನು ಬಲಪಡಿಸಬೇಕು ಎಂದು ಹೈಕೋರ್ಟ್ ಪೀಠ ತಿಳಿಸಿದೆ.
ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು: ಅಲ್ಲದೆ, ಸೈಬರ್ ಅಪರಾಧಗಳ ತನಿಖೆಯಲ್ಲಿನ ಪ್ರಗತಿ ಅಥವಾ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಪ್ರಕರಣಗಳನ್ನು ಒಂದೇ ಸೂರಿನಡಿ ತರಬೇಕು. ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು. ಸಿಸಿಸಿ ಅಡಿಯಲ್ಲಿ ತರಲಾದ ಅಧಿಕಾರಿಗಳನ್ನು ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ವರ್ಗಾವಣೆ ಮಾಡಬಾರದು. ಸಿಸಿಸಿ ಮುಖ್ಯಸ್ಥರ ಪೂರ್ವಾಪರ ಸಮಾಲೋಚನೆಯಿಲ್ಲದೆ ಮುಖ್ಯಸ್ಥ ಮತ್ತು ಅವರ ತಂಡದ ಸದಸ್ಯರನ್ನು ರಾತ್ರೋರಾತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಅವರ ವರ್ಗಾವಣೆ ಮಾಡುವ ಮೂಲಕ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಅಡಚಣೆ ಉಂಟು ಮಾಡಬಾರದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.


