
ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಮೆದುಳು ಜ್ವರ) ಪೀಡಿತರಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಶಿಶು ಮತ್ತು 52 ವರ್ಷದ ಮಹಿಳೆ ಈ ಜ್ವರಕ್ಕೆ ಬಲಿಯಾಗಿದ್ದಾರೆ. ಇಬ್ಬರೂ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಾವಿ ನೀರಿನ ಮೂಲಕ ಶಿಶುವಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಗಸ್ಟ್ 8 ರಿಂದ ತಾಯಿ ಮತ್ತು ಮಗುವನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಗು ಚಿಕಿತ್ಸೆ ಪಡೆಯುತ್ತಿದ್ದಾಗ ಅಸುನೀಗಿದೆ.
ಮಲಪ್ಪುರಂನ ವೆಂಗಾರದ ರಮ್ಲಾ (52) ಎಂಬ ಮಹಿಳೆ ಸಹ ಇದೇ ಅಪಾಯಕಾರಿ ಮೆದುಳು ಜ್ವರಕ್ಕೆ ಬಲಿಯಾಗಿದ್ದಾರೆ. ಆಗಸ್ಟ್ 1 ರಂದು ಇವರಿಗೆ ಪರೀಕ್ಷೆ ಮಾಡಲಾಗಿತ್ತು. ಆಗ ಇವರಿಗೆ ಪಾಸಿಟಿವ್ ಎಂದು ಗೊತ್ತಾಗಿತ್ತು. ಆರಂಭದಲ್ಲಿ ಮಲಪ್ಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನಂತರ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು.
ಪ್ರಸ್ತುತ ಇನ್ನೂ ಏಳು ರೋಗಿಗಳಿಗೆ ಇದೇ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ತಿಂಗಳಷ್ಟೇ, ತಾಮರಸ್ಸೇರಿಯ ಕೊರಂಗಡ್‌ನ ಅನಪ್ಪರಂಪೊಯಿಯಿಂದ ಅನಯಾ (9) ಕೂಡ ಸೋಂಕಿನಿಂದ ನಿಧನರಾಗಿದ್ದರು. ಇನ್ನೂ ಏಳು ಮಂದಿಗೆ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿನ ನಿಖರವಾದ ಮೂಲವನ್ನ ಇನ್ನೂ ಗುರುತಿಸಲಾಗಿಲ್ಲ. ಈ ರೋಗವು ಸಾಮಾನ್ಯವಾಗಿ ನಿಂತ ಕೊಳಗಳು ಅಥವಾ ನದಿಗಳಲ್ಲಿ ಸ್ನಾನ ಮಾಡುವಾಗ ಸೋಂಕು ತಗಲುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಶಿಶುವಿನ ಪ್ರಕರಣದಲ್ಲಿ ಸ್ನಾನ ಮಾಡಲು ಬಾವಿಯ ನೀರನ್ನು ಮಾತ್ರ ಬಳಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದೇ ನೀರಿನಲ್ಲಿನ ಸೋಂಕು ಮಗುವಿಗೆ ತಗುಲಿರುವ ಸಾಧ್ಯತೆಗಳಿವೆ. ಕೆಲವು ರೋಗಿಗಳು ತಾವು ಕೊಳಗಳು ಅಥವಾ ನದಿಗಳ ನೀರನ್ನು ಬಳಸಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆರೋಗ್ಯ ಇಲಾಖೆ ಹೇಳುವುದಿಷ್ಟು: ಆರೋಗ್ಯ ಇಲಾಖೆಯ ಪ್ರಕಾರ 2025 ರಲ್ಲಿ ಕೇರಳದಲ್ಲಿ ಇಲ್ಲಿಯವರೆಗೆ 42 ಪ್ರಕರಣಗಳು ವರದಿಯಾಗಿವೆ. ಈ ರೋಗವು ಶೇ 97ರಷ್ಟು ಮರಣ ಪ್ರಮಾಣವನ್ನು ಹೊಂದಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಧಿಕಾರಿಗಳು ಸಾರ್ವಜನಿಕರನ್ನು ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂದರೇನು?: ಅಮೀಬಾ ಮೆದುಳಿಗೆ ಪ್ರವೇಶಿಸಿದಾಗ ಈ ರೋಗವು ಸಂಭವಿಸುತ್ತದೆ. ಇದರಿಂದಾಗಿ ಮೆದುಳಿನ ಜೀವಕೋಶಗಳಿಗೆ ಹಠಾತ್ ಹಾನಿ ಮತ್ತು ಊತ ಉಂಟಾಗುತ್ತದೆ. ಇದು ವೇಗವಾಗಿ ಗಂಭೀರ ಸ್ಥಿತಿಗೆ ತಲುಪಬಹುದು. ಮೆದುಳಿನ ಸಾವಿಗೂ ಕಾರಣವಾಗಬಹುದು. ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ನಿಪಾದಂತಹ ರೋಗಗಳು ನಂತರ ಮೆದುಳಿನ ಜ್ವರವಾಗಿ ಬೆಳೆಯಬಹುದಾದರೂ, ಮಾನವರಲ್ಲಿ ಅಮೀಬಿಕ್ ಸೋಂಕು ಅಪರೂಪ. ಹಲವಾರು ರೀತಿಯ ಅಮೀಬಾಗಳಲ್ಲಿ, ನೇಗ್ಲೇರಿಯಾ ಫೌಲೇರಿ ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಈ ರೋಗದ ಲಕ್ಷಣಗಳೇನು?
- ಸಾಮಾನ್ಯವಾಗಿ ಸೋಂಕು ತಗುಲಿ 1ರಿಂದ 9 ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:
- ತೀವ್ರ ತಲೆನೋವು
- ಜ್ವರ
- ವಾಂತಿ ಮತ್ತು ವಾಕರಿಕೆ
- ಕುತ್ತಿಗೆ ಬಿಗಿತ
- ಪ್ರಕಾಶಮಾನವಾದ ಬೆಳಕನ್ನು ನೋಡಿದಾಗ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
ರೋಗಿಗಳು ಸಾಮಾನ್ಯವಾಗಿ ಮೆನಿಂಜೈಟಿಸ್ ತರಹದ ರೋಗಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಮೆನಿಂಜೈಟಿಸ್ ಚಿಕಿತ್ಸೆ ವಿಫಲವಾದರೆ, ಅಮೀಬಿಕ್ ಮೆದುಳಿನ ಜ್ವರವನ್ನು ದೃಢೀಕರಿಸಲು ಪ್ರಯೋಗಾಲಯ ದ್ರವ ವಿಶ್ಲೇಷಣೆ ಮಾಡಲಾಗುತ್ತದೆ. ಮೆನಿಂಜೈಟಿಸ್ ಸ್ವತಃ ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳ ಉರಿಯೂತವಾಗಿದೆ. ಇದು ವೈರಲ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರವಾಗಿರಬಹುದು. ಬ್ಯಾಕ್ಟೀರಿಯಾದ ಮೆನಿಂಜೈಟಿಸ್ ವಿಶೇಷವಾಗಿ ತೀವ್ರವಾಗಿರುತ್ತದೆ ಮತ್ತು ತುರ್ತು ಆರೈಕೆಯ ಅಗತ್ಯವಿರುತ್ತದೆ ಎಂದು ಡಾ. ಗೀತಾ ಪಿ. ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಇದು ಮಾನವ ದೇಹವನ್ನು ಪ್ರವೇಶಿಸುವುದು ಹೇಗೆ?: ನಿಂತ ನೀರಿನಲ್ಲಿ ವಾಸಿಸುವ ಅಮೀಬಾ ಮೂಗಿನ ಒಳಪದರದ ಮೂಲಕ ಪ್ರವೇಶಿಸುತ್ತದೆ. ನಿಂತ ಕೊಳಗಳು ಅಥವಾ ನದಿಗಳಲ್ಲಿ ಸ್ನಾನ ಮಾಡುವುದು ಅಥವಾ ಮೂಗಿನೊಳಗೆ ನೀರು ಚಿಮ್ಮುವುದರಿಂದ ಜೀವಿಯು ಮೆದುಳಿಗೆ ಪ್ರಯಾಣಿಸಿ ರೋಗವನ್ನು ಪ್ರಚೋದಿಸುತ್ತದೆ. ಲಕ್ಷಣಗಳು ಕಾಣಿಸಿಕೊಳ್ಳಲು ಒಂದು ವಾರ ತೆಗೆದುಕೊಳ್ಳಬಹುದು. ಮುಖ್ಯವಾಗಿ, ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.
ರೋಗ ನಿರ್ಣಯ: ನಿಪಾ ಅಥವಾ ವೆಸ್ಟ್ ನೈಲ್‌ನಂತಹ ವೈರಸ್‌ಗಳಿಗೆ ದೃಢೀಕರಣಕ್ಕಾಗಿ ಪಿಸಿಆರ್ ಪರೀಕ್ಷೆಗಳು ಅಗತ್ಯವಿದ್ದರೂ, ಅಮೀಬಿಕ್ ಸೋಂಕನ್ನು ಸೂಕ್ಷ್ಮದರ್ಶಕೀಯವಾಗಿ ಗುರುತಿಸಬಹುದು. ಅನುಮಾನವಿದ್ದರೆ, ವೈದ್ಯರು ಅಮೀಬಾವನ್ನು ಪತ್ತೆಹಚ್ಚಲು ಸೆರೆಬ್ರೊಸ್ಪೈನಲ್ ದ್ರವವನ್ನು ಪರೀಕ್ಷಿಸುತ್ತಾರೆ.
ಈ ಮೆದುಳು ಜ್ವರವನ್ನು ತಡೆಗಟ್ಟುವುದು ಹೇಗೆ?
- ನಿಶ್ಚಲ ಮತ್ತು ನೈರ್ಮಲ್ಯವಿಲ್ಲದ ಜಲಮೂಲಗಳಿಂದ ಬಳಕೆ ಮಾಡದಿರುವುದು ಉತ್ತಮ. ವಿಶೇಷವಾಗಿ ಬೇಸಿಗೆಯಲ್ಲಿ ಇದರಿಂದ ದೂರ ಇರುವುದು ಉತ್ತಮ
- ಈಜುಕೊಳಗಳು ಮತ್ತು ಬಾವಿಗಳಲ್ಲಿ ಸರಿಯಾದ ಕ್ಲೋರಿನೀಕರಣ ಆಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಸ್ನಾನ ಮಾಡುವಾಗ ಅಥವಾ ನೀರಿನಲ್ಲಿ ಆಟವಾಡುವಾಗ ನೀರು ಮೂಗಿಗೆ ಪ್ರವೇಶಿಸಲು ಬಿಡಬೇಡಿ.
- ಹರಿಯುವ ನದಿಗಳು ಕಡಿಮೆ ಅಪಾಯವನ್ನುಂಟು ಮಾಡುತ್ತವೆ, ಆದರೆ ಕಲ್ಲಿನ ಪ್ರದೇಶಗಳಲ್ಲಿ ನಿಂತ ಕೊಳಗಳು ಹೆಚ್ಚು ಅಪಾಯಕಾರಿ.
ಈ ರೋಗ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆ ಏನು?: ರೋಗಿಗಳು ಸ್ವಯಂ – ಔಷಧಗಳನ್ನು ತಪ್ಪಿಸಬೇಕು ಮತ್ತು ರೋಗಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ವೈದ್ಯರನ್ನು ಕಾಣುವುದು ಅವಶ್ಯಕ. ಆಧುನಿಕ ಪಿಸಿಆರ್ ಪರೀಕ್ಷೆಗಳೊಂದಿಗೆ ಈ ರೋಗವನ್ನು 24 ಗಂಟೆಗಳ ಒಳಗೆ ಪತ್ತೆಹಚ್ಚಬಹುದು. ಪ್ರಸ್ತುತ, ಯಾವುದೇ ನಿರ್ಣಾಯಕ ಚಿಕಿತ್ಸೆ ಅಥವಾ ನಿಗದಿತ ಚಿಕಿತ್ಸೆ ಇಲ್ಲ. ಆದಾಗ್ಯೂ, ಶಿಲೀಂಧ್ರನಾಶಕ ಔಷಧಗಳ ಸಂಯೋಜನೆಯನ್ನು ನೀಡಲಾಗುತ್ತಿದೆ. ವಿಶೇಷವಾಗಿ ಕೇರಳದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಅರಿವು ಮತ್ತು ಎಚ್ಚರಿಕೆಯೇ ಉತ್ತಮ ರಕ್ಷಣೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ರೋಗದ ಮೂಲ ಇನ್ನೂ ನಿಗೂಢ: ರೋಗದ ನಿಖರವಾದ ಮೂಲವನ್ನು ಗುರುತಿಸಲಾಗಿಲ್ಲ. ಸಾಮಾನ್ಯವಾಗಿ ನೀರು ಮೂಗಿಗೆ ಪ್ರವೇಶಿಸಿದಾಗ ಸೋಂಕು ಹರಡುವ ಸಾಧ್ಯತೆ ಇದೆ. ನಿಂತ ನೀರು, ಕೊಳಗಳು ಅಥವಾ ನದಿಗಳ ಮೂಲಕ ಈ ರೋಗ ಹರಡುವ ಸಾಧ್ಯತೆಗಳಿವೆ ಎಂದು ಕಂಡುಕೊಳ್ಳಲಾಗಿದೆ. ಆದರೆ ಕೆಲವು ರೋಗಿಗಳು ಅಂತಹ ನೀರಿನಲ್ಲಿ ಸ್ನಾನ ಮಾಡಿರಲಿಲ್ಲ, ಮತ್ತು ಶಿಶುವಿಗೆ ಬಾವಿ ನೀರು ಮಾತ್ರ ಒಗ್ಗಿಕೊಳ್ಳುತ್ತಿತ್ತು. ಇನ್ನು ಸೋಂಕನ್ನು ತಡೆಗಟ್ಟಲು ಮೂಗಿನೊಳಗೆ ನೀರು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಅರಿವು ಅತ್ಯಗತ್ಯ ಎಂದು ಡಾ. ಗೀತಾ ಹೇಳಿದ್ದಾರೆ.



