
ಉತ್ತರಾಖಂಡದ ಹಲವೆಡೆ ಭಾರಿ ವರ್ಷಧಾರೆಯಿಂದ ಅನಾಹುತಗಳು ಸಂಭವಿಸಿದೆ. ಚಮೋಲಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಯಿಂದ ಭಾರಿ ಭೂಕುಸಿತ ಉಂಟಾಗಿದ್ದು, ಅವಶೇಷಗಳಡಿಯಲ್ಲಿ ಹೂತುಹೋಗಿ ದಂಪತಿ ಸಾವನ್ನಪ್ಪಿದ್ದಾರೆ. ಅಲ್ಲದೆ, ರುದ್ರಪ್ರಯಾಗ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ವಿಪತ್ತಿನಿಂದಾಗಿ, ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಚಮೋಲಿಯ ಮೊಪಾಟಾ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಪತಿ-ಪತ್ನಿ ಹೂತುಹೋಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರಿಗೆ ದೇವಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಸುಮಾರು 20 ಜಾನುವಾರುಗಳು ಸಹ ಅವಶೇಷಗಳ ಅಡಿಯಲ್ಲಿ ಸಿಲುಕಿವೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಚಮೋಲಿ ಹೆದ್ದಾರಿ ಬಂದ್ ಮಾಡಲಾಗಿದೆ. ಇಲ್ಲಿನ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇಲ್ಲಿನ ಸ್ಥಳೀಯ ಗ್ರಾಮಸ್ಥರು ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟ್ಯಾಂಕರ್‌ಗಳ ಮೂಲಕ ಥರಾಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.
ಚಮೋಲಿ ಜಿಲ್ಲೆಯ ಸೀಮಾಲ್ ಸೈನ್ ಮತ್ತು ಕುಲ್ಸಾರಿ ಬಳಿ ಇರುವ ಪ್ರಮುಖ ಹೆದ್ದಾರಿಗಳಾದ ನಂದಪ್ರಯಾಗ, ಕಮೆಡಾ, ತೆಲ್ಲಿಪಾನಿ, ಪಾಗಲ್ ನಾಲಾ, ಗುಲಕೋಟಿ ಮತ್ತು ಗ್ವಾಲ್ಡಮ್ ಹೆದ್ದಾರಿಗಳು ಭಾರಿ ಮಳೆಯಿಂದಾಗಿ ಬಂದ್ ಆಗಿವೆ. ಇದರಿಂದ ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ. ಭಾರತೀಯ ರಸ್ತೆಗಳ ಸಂಸ್ಥೆ (BRO) ರಸ್ತೆಗಳನ್ನು ತೆರವುಗೊಳಿಸಿ, ಸಂಚಾರ ಯಥಾಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ.
ಥರಾಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದೆ. ಇದರಿಂದಾಗಿ ಜನರು ಆತಂಕದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಭೂಕುಸಿತದ ಭೀತಿ ಹೆಚ್ಚಾಗಿದೆ. ಈ ಕಾರಣದಿಂದಾಗಿ, ಪ್ರಯಾಣಿಕರಿಗೆ ಮತ್ತು ಸ್ಥಳೀಯರಿಗೆ ತೊಂದರೆಗಳು ಎದುರಾಗಿವೆ.
ಥರಾಲಿ ಸಮುದಾಯ ಆರೋಗ್ಯ ಕೇಂದ್ರದ ಸಮೀಪ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಬೆಟ್ಟದಿಂದ ಬಿದ್ದ ಕಲ್ಲು-ಮಣ್ಣಿನ ಅವಶೇಷಗಳು ಜನರ ಮನೆಗಳನ್ನು ತಲುಪಿವೆ. ಈ ಪರಿಸ್ಥಿತಿಯನ್ನು ಮೊದಲೇ ಅರಿತಿದ್ದ ಆಡಳಿತ, ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯನ್ನು ಮೊದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು.
ಥರಾಲಿ ಉಪ ಆಯುಕ್ತರಾದ ಪಂಕಜ್ ಭಟ್ ಅವರ ಈ ಬಗ್ಗೆ ಪ್ರತಿಕ್ರಿಯಿಸಿ, “ಮೊಪಾಟಾ ಗ್ರಾಮದಲ್ಲಿ ಭೂಕುಸಿತದಿಂದಾಗಿ ದಂಪತಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಅದೇ ಪ್ರದೇಶದಲ್ಲಿ ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಕೂಡಲೇ ದೇವಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳದಲ್ಲಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿದೆ.
ರುದ್ರಪ್ರಯಾಗ್ ಜಿಲ್ಲೆಯ ಬಸುಕೆದಾರ್ ವ್ಯಾಪ್ತಿಯ ಬದೇತ್ ಡುಂಗರ್ ಟೋಕ್ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ, ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತವು ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದೆ.
ರುದ್ರಪ್ರಯಾಗ್ ಜಿಲ್ಲಾಡಳಿತದ ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಯೂರ್ ಪ್ರದೇಶದಲ್ಲಿ ಒಂದು ಮನೆಗೆ ಹಾನಿಯಾಗಿದೆ ಮತ್ತು ಬೊಲೆರೊ ವಾಹನ ಕೊಚ್ಚಿಹೋಗಿದೆ. ಬದೇತ್, ಬಗದ್ದರ್ ಮತ್ತು ತಲ್ಜಮಾನಿ ಗ್ರಾಮಗಳ ಎರಡೂ ಬದಿಗಳಲ್ಲಿರುವ ಹೊಳೆಯಲ್ಲಿ ಅಪಾರ ನೀರು ಮತ್ತು ಅವಶೇಷಗಳು ಕಂಡುಬಂದಿವೆ. ಕಿಮಾನಾದಲ್ಲಿ ಕೃಷಿ ಭೂಮಿ ಮತ್ತು ರಸ್ತೆಯಲ್ಲಿ ದೊಡ್ಡ ಬಂಡೆಗಳು ಮತ್ತು ಅವಶೇಷಗಳು ಕಂಡುಬಂದಿವೆ. ಅರಖುಂಡ್‌ನಲ್ಲಿ ಮೀನು ಕೊಳಗಳು ಮತ್ತು ಕೋಳಿ ಸಾಕಣೆ ಕೇಂದ್ರಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ..
ಅಲ್ಲದೆ, ಚೆನ್ನಗಡದ ಮಾರುಕಟ್ಟೆ ಪ್ರದೇಶದಲ್ಲಿ ಅವಶೇಷಗಳು ತುಂಬಿ ವಾಹನಗಳು ಕೊಚ್ಚಿಹೋಗಿವೆ. ಹಾಗೂ ಚೆನೇಗಡ್ ದುಗರ್ ಗ್ರಾಮದಲ್ಲಿ ಕೆಲವರು ಕಾಣೆಯಾಗಿದ್ದಾರೆ. ಅಲ್ಲದೆ, ಜೌಲಾ ಬಡೇತ್‌ನಲ್ಲಿಯೂ ಕೆಲವು ಜನರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ರುದ್ರಪ್ರಯಾಗ್ ಜಿಲ್ಲಾಡಳಿತವು ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಮತ್ತು ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಕಂದಾಯ ಇಲಾಖೆಯ ತಂಡಗಳು ನಿರಂತರವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿವೆ.



