ಗಣೇಶ ಹಬ್ಬದಲ್ಲಿ ಡಿಜೆಗೆ ಅವಕಾಶ ನಿರಾಕರಣೆ: ದಾವಣಗೆರೆ ಜಿಲ್ಲಾಡಳಿತ-ಡಿಜೆ ಮಾಲೀಕರ ಹಗ್ಗಜಗ್ಗಾಟ

ಜಿಲ್ಲೆ ಗಣೇಶ ಚತುರ್ಥಿಗೆ ಸಿದ್ಧಗೊಳ್ಳುತ್ತಿದೆ. ಗಲ್ಲಿಗಲ್ಲಿಯಲ್ಲಿ ಗಣೇಶನ ಪೆಂಡಾಲ್ಗಳು ನಿರ್ಮಾಣವಾಗುತ್ತಿವೆ. ಈ ಬಾರಿ ಗಣೇಶನನ್ನು ಬರಮಾಡಿಕೊಳ್ಳಲು ಹಾಗೂ ನಿಮಜ್ಜನದ ವೇಳೆ ವಿಪರೀತ ಶಬ್ದ ಮಾಡುವ ಡಿಜೆಗೆ ದಾವಣಗೆರೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಜಿಲ್ಲಾಡಳಿತದ ನಡೆಗೆ ಗಣೇಶ ಮಂಡಳಿಗಳು ಆಕ್ರೋಶ ವ್ಯಕ್ತಪಡಿಸಿವೆ.
ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸೇರಿದ್ದಾಗ, ದಾವಣಗೆರೆ ಡಿಸಿ ಡಾ.ಗಂಗಾಧರ ಸ್ವಾಮಿ ಜಿ.ಎಂ. ಅವರು ಯಾವುದೇ ಕಾರಣಕ್ಕೂ ಡಿಜೆಗೆ ಅನುಮತಿ ಇಲ್ಲ ಎಂದು ಹೇಳಿದ್ದರು. ಹಾಗಾಗಿ ದಾವಣಗೆರೆ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳು, ಡಿಜೆ ಮಾಲೀಕರು ಮನವಿ ಕೊಟ್ಟು ಡಿಜೆಗೆ ಅನುಮತಿ ಕೇಳಿದ್ದರು. ಆದರೆ, ಮನವಿ ಕೊಟ್ಟವರ ಮುಂದೆಯೇ ಮತ್ತೆ ಡಿಜೆಗೆ ಮನವಿ ಕೊಡಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಸರ್ಕಾರದ ಮಟ್ಟದಲ್ಲೇ ಡಿಜೆ ನಿಷೇಧಿಸಿದ್ದು, ಬಿಜೆಪಿ ನಾಯಕರು ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿದ್ದಾರೆ. ಡಿಜೆಗೆ ಅವಕಾಶ ಕೊಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಅಲ್ಲದೇ ಹಗಲು ವೇಳೆ ಜನವಸತಿ ಪ್ರದೇಶದಲ್ಲಿ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಶಬ್ದ ಮಟ್ಟಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.
“ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ಡಿಜೆ ಧ್ವನಿ ವರ್ಧಕಗಳಿರುವ 700-800 ಅಂಗಡಿಗಳಿದ್ದು, ಡಿಜೆ ನಂಬಿ 6ರಿಂದ 7 ಸಾವಿರ ಜನ ಜೀವನ ನಡೆಸುತ್ತಾ ಬಂದಿದ್ದಾರೆ. ಹೊಲ, ಚಿನ್ನಾಭರಣವನ್ನು ಮಾರಿ ಬಂಡವಾಳ ಹಾಕಿದ್ದು, ಇದೀಗ ಡಿಜೆ ನಿಷೇಧ ಮಾಡಿರುವುದು ಸಂಕಷ್ಟಕ್ಕೆ ದೂಡಿದಂತೆ ಆಗುತ್ತದೆ. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಡಿಜೆ ನಿಷೇಧ ಮಾಡಿರುವುದರಿಂದ ಡಿಜೆ ಮಾಲೀಕರಿಗೆ, ಕೆಲಸಗಾರರಿಗೆ ಕೆಲಸ ಇಲ್ಲದಂತೆ ಆಗುತ್ತದೆ. ಡಿಜೆ ಉದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿರುವವರು ಬೀದಿಪಾಲು ಆಗುವ ಸಂಭವ ಹೆಚ್ಚಿದೆ.” ಎಂದು ಡಿಜೆ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಆರ್.ಲಕ್ಷ್ಮಣ್ ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಜಿ.ಎಂ. ಪ್ರತಿಕ್ರಿಯಿಸಿ, “ಡಿಜೆಯಿಂದ ಮಕ್ಕಳಿಗೆ, ವೃದ್ಧರಿಗೆ, ನಾಯಿಗಳಿಗೆ ಇನ್ನಿತರ ಜಾನುವಾರುಗಳಿಗೆ ತೊಂದರೆ ಆಗುತ್ತದೆ. ಗಣೇಶ ಮೆರವಣಿಗೆಯಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅದೇ ಕರ್ಕಶ ಶಬ್ದದ ಮಧ್ಯೆ ಕೆಲಸ ಮಾಡ್ತಾರೆ. ಅವರಿಗೆ ಅದರಿಂದ ತೊಂದರೆ ಆಗಲಿದೆ. ಡಿಜೆ ನಿಷೇಧ ಮಾಡುವಂತೆ ಎಸ್ಪಿ ಕಚೇರಿಯಿಂದ ಪತ್ರ ಕಳುಹಿಸಲಾಗಿತ್ತು. ಆ ಕಾರಣಕ್ಕೆ ನಿಷೇಧ ಮಾಡಿದ್ದೇವೆ. ಈಗಾಗಲೇ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಎಲ್ಲಾ ಕಡೆ ನಿಷೇಧಿಸಿದ್ದಾರೆ. ಬೇಕಾದರೆ ಧ್ವನಿ ವರ್ಧಕ ಬಳಸಿ ಹಬ್ಬ ಆಚರಿಸಲಿ” ಎಂದು ಮನವಿ ಮಾಡಿದರು.
ಡಿಜೆ ಮಾಲೀಕರ ಸಂಘದ ರಾಜ್ಯಧ್ಯಕ್ಷ ಆರ್.ಲಕ್ಷ್ಮಣ್ ಪ್ರತಿಕ್ರಿಯಿಸಿ, “ಜಿಲ್ಲಾಧಿಕಾರಿಗೆ ಡಿಜೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಈದ್ ಮಿಲಾದ್ ಹಾಗೂ ಗಣೇಶ ಹಬ್ಬ ಎರಡೂ ಇವೆ. ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಹೇಳಿದಂತೆ ಕಡಿಮೆ ಬಾಕ್ಸ್ ಅಳವಡಿಸಿಕೊಂಡು ಮಾಡುತ್ತೇವೆ ಎಂದು ಮನವಿ ಮಾಡಿದ್ದೆವು. ಆದರೆ ಜಿಲ್ಲಾಧಿಕಾರಿ ಅವರು ನಮ್ಮ ಬೇಡಿಕೆಯನ್ನು ನಿರಾಕರಿಸಿ ಡಿಜೆ ನಿಷೇಧ ಮಾಡಿದ್ದಾರೆ. ಕೆಲವರು ಹೊಲ, ಚಿನ್ನಾಭರಣವನ್ನು ಮಾರಾಟ ಮಾಡಿ ಡಿಜೆ ಪರಿಕರನ್ನು ಕೊಂಡು ಈ ಉದ್ಯಮಕ್ಕೆ ಬಂದಿದ್ದಾರೆ. ಅವಕಾಶ ಮಾಡಿಕೊಡುತ್ತಾರೆ ಎಂದು ಬಂಡವಾಳ ಹಾಕಿದ್ದಾರೆ” ಎಂದರು.



