
ಚನ್ನಪಟ್ಟಣ :- ಪೌರಾಣಿಕ ನಾಟಕಗಳು ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಜನಸಾಮಾನ್ಯರು ನಾಟಕದಲ್ಲಿ ಬರುವ ಉತ್ತಮ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು .
ಪಟ್ಟಣದ ಶತಮಾನೋತ್ಸವ ಭವನದಲ್ಲಿ ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ಹಾಗೂ ಡಾ. ರಾಜ್ ಬಳಗ ವತಿಯಿಂದ ಆಯೋಜಿಸಲಾಗಿದ್ದ ‘ದಕ್ಷ ಯಜ್ಞ ಅಥವಾ ಬೃಗುಮುನಿ ಗರ್ವಭಂಗ’ ಎಂಬ ನಾಟಕ ಪ್ರದರ್ಶನ ಹಾಗೂ ಕಲಾವಿದರಾದ ಎಲೆಕೆರೆ ಮಂಜುನಾಥ್ ರವರಿಗೆ ಬೊಂಬೆನಾಡು ಕಲಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಳೆದ ಹತ್ತು ವರ್ಷಗಳಿಂದ ರಂಗಭೂಮಿಯ ಉಳಿವಿಗೆ ಶ್ರಮಿಸುತ್ತಿದ್ದು, ಕಲೆ ಮತ್ತು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಬೆಳೆಸುವ ಕೆಲಸವನ್ನು ಮಾಡುತ್ತಿದೆ . ಕಲೆಗೆ ಜಾತಿ, ಧರ್ಮಗಳ ಹಂಗಿಲ್ಲ. ಉತ್ತಮ ಕಲಾವಿದರನ್ನು ಸಮಾಜ ಜಾತಿಯ ಚೌಕಟ್ಟು ಮೀರಿ ಗೌರವಿಸುತ್ತಿದೆ. ಆಧುನಿಕತೆಯ ನಡುವೆ ಪೌರಾಣಿಕ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಂಡಿವೆ ಇಂತಹ ನಾಟಕಗಳಿಗೆ ಜನರ ಪ್ರೋತ್ಸಾಹ ಸದಾ ಅಗತ್ಯವಿದೆ. ನಾಟಕ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಹೆಚ್ಚು ನಾಟಕ ಪ್ರದರ್ಶನಗಳು ನಡೆಯಬೇಕಿದೆ ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ನಗರದಲ್ಲಿ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಾಣ ಮಾಡಬೇಕು ಎಂಬುದು ಬಹುತೇಕ ಕಲಾವಿದರ ಒತ್ತಾಸೆಯಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವಾಗಿ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಡಾ. ರಾಜ್ ಕುಮಾರ್ ಬಯಲು ರಂಗಮಂದಿರ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ತಿಳಿಸಿದರು.
ಗೌಡಗೆರೆ ಚಾಮುಂಡೇಶ್ವರಿ ಬಸಪ್ಪನ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಮಲ್ಲೇಶ್ ಗುರೂಜಿ ಮಾತನಾಡಿ ಆಧುನಿಕತೆ, ಪಾಶ್ಚತ್ಯ ಸಂಸ್ಕೃತಿ ಹಾಗೂ ದೃಶ್ಯಮಾಧ್ಯಮಗಳ ಪ್ರಭಾವದಿಂದ ಇಂದಿನ ಸಮಾಜದಲ್ಲಿ ನಾಡಿನ ವೈಭವ ಮತ್ತು ಇತಿಹಾಸವನ್ನು ತಿಳಿಸುವಂತಹ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಕಣ್ಮರೆಯಾಗುತ್ತಿದೆ.ಪೌರಾಣಿಕ ನಾಟಕಗಳು ಭಾರತೀಯ ಉದಾತ್ತ ಮೌಲ್ಯ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಇಂತಹ ಪೌರಾಣಿಕ ನಾಟಕಗಳ ಪ್ರದರ್ಶನಗಳು ಹೆಚ್ಚಾಗಬೇಕು .ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ,ಪ್ರತಿಯೊಬ್ಬರು ಕಲೆ ಮತ್ತು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಬೆಳೆಸಬೇಕು ಎಂದರು.
ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಗುರುಮಾದಯ್ಯ ಮಾತನಾಡಿ ಪೌರಾಣಿಕ ಹಾಗೂ ಜಾನಪದದ ಕಣಜಗಳಾಗಿರುವ ಗ್ರಾಮೀಣ ಪ್ರದೇಶಗಳಲ್ಲಿನ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡಬೇಕಿದೆ. ಇಂತಹ ಕಲೆಗಳನ್ನು ಉಳಿಸಿ, ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ತಿಳಿಸಿಕೊಡುವ ಹೊಣೆಗಾರಿಕೆ ಪ್ರತಿಯೊಂದು ಸಂಘ ಸಂಸ್ಥೆಗಳು ಮೇಲಿದೆ ಆದ್ದರಿಂದ ನಮ್ಮ ಕಲಾ ಟ್ರಸ್ಟ್ ಪ್ರತಿವರ್ಷ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ರಂಗಭೂಮಿ ಕಲಾವಿದ ಗೋಪಾಲಗೌಡ, ರಾಂಪುರ ಗ್ರಾಮದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಡಾ. ವಾಸುದೇವ್, ಮಾಜಿ ನಗರಸಭಾ ಅಧ್ಯಕ್ಷ ಎಲೆಕೆರೆ ನಾಗರಾಜು, ಗುತ್ತಿಗೆದಾರರಾದ ಎಸ್. ಎಂ. ರಾಜು, ಸಮಾಜ ಸೇವಕ ಗೋವಿಂದಹಳ್ಳಿ ನಾಗರಾಜು, ಕಲಾಪೋಷಕ ಸುಮತಿ ಕುಮಾರ್ ಜೈನ್, ಹಿರಿಯ ಕಲಾವಿದರಾದ ವಿಜಯಕುಮಾರ್, ವೈದ್ಯ ಡಾ.ಶ್ರೀನಿವಾಸ್, ನಗರಸಭಾ ಸದಸ್ಯರಾದ ಸುಮಾ ರವೀಶ್, ಎಲೆಕೆರೆ ಗ್ರಾಮದ ಯಜಮಾನರಾದ ಹನುಮಣ್ಣ, ಸೌಭಾಗ್ಯ ಪುಟ್ಟಸ್ವಾಮಿಗೌಡ, ಎಸ್. ಡಿ. ಎಂ. ಸಿ ಸಮನ್ವಯ ವೇದಿಕೆಯ ನಾಗವಾರ ಶಂಭುಗೌಡ, ನಿವೃತ್ತ ಶಿಕ್ಷಕ ಶಿವಲಿಂಗಯ್ಯ,ಅಂಚೆ ಇಲಾಖೆ ಸಿದ್ದರಾಜು , ವೆಂಕಟಮುದ್ದಯ್ಯ , ಗುರು ಜೋಗಯ್ಯ ,ಅಜಾದ್ ಬ್ರಿಗೇಡ್ ಅಧ್ಯಕ್ಷ ಗಜೇಂದ್ರ ಸಿಂಗ್, ನಾಗೇಂದ್ರರಾವ್, ಎಂಟಿಆರ್ ತಿಮ್ಮರಾಜು,ಕೂಡ್ಲೂರು ವೆಂಕಟೇಶ್ ಮೊದಲಾದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಹಿರಿಯ ಕಲಾವಿದ ಎಲೆಕೆರೆ ಮಂಜುನಾಥ್ ರವರಿಗೆ ಬೊಂಬೆನಾಡು ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರು ಶ್ರೀ ಫೌಂಡೇಶನ್ ಟ್ರಸ್ಟ್ ವತಿಯಿಂದ ಮಂಜುನಾಥ್ ರವರಿಗೆ ಗುರುಶ್ರೀ ಸೇವಾ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಎಲೆಕೆರೆ ರವೀಶ್, ರಾಂಪುರ ರಾಜಣ್ಣ, ಲಾಯರ್ ಲಕ್ಷ್ಮಣ್ , ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷ ಪುಟ್ಟಸ್ವಾಮಿಗೌಡ( ಡಿಪಿಎಸ್),ಮಾಜಿ ಅಧ್ಯಕ್ಷ ವಸಂತ ಕುಮಾರ್, ಮಹೇಶ್ ಕುಮಾರ್, ಎಂಟಿಆರ್ ತಿಮ್ಮರಾಜು, ಬಿ.ಕೆ. ತೇಜಸ್, ಟ್ರಸ್ಟ್ ಗೌರವಾಧ್ಯಕ್ಷ ಚಕ್ಕೆರೆ ವಿಜೇಂದ್ರ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


