ರಾಜ್ಯಸುದ್ದಿ

ಕೆಎಸ್ಆರ್​ಟಿಸಿ, ಬಿಎಂಟಿಸಿ ನೌಕರರ ಮುಷ್ಕರ ಬಹುತೇಕ ಫಿಕ್ಸ್

ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಬುಧವಾರವಷ್ಟೇ ಸಭೆ ನಡೆಸಿ, ಮಾರ್ಚ್ 22 ರೊಳಗೆ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿದ್ದರೆ ಮುಷ್ಕರ ಮಾಡುವ ಎಚ್ಚರಿಕೆ ನೀಡಿತ್ತು. ಇದೀಗ ಕೆಎಸ್ಆರ್​ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ಕೂಡ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಡಬಲ್ ಡಬಲ್ ಶಾಕ್ ಎದುರಾಗಿದೆ.

ಕಾಂಗ್ರೆಸ್ ಪಕ್ಷವು (Congress) ಚುನಾವಣಾ ಪ್ರಣಾಳಿಕೆಯಲ್ಲಿ, ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನವನ್ನೇ ಸಾರಿಗೆ ನೌಕರರಿಗೆ ಕೂಡ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆದರೂ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ. ಮಾರ್ಚ್ 22 ರೊಳಗೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನವನ್ನು ಕೆಎಸ್​ಆರ್​ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ ನೀಡಬೇಕು. ಇಲ್ಲವಾದರೆ ಮಾರ್ಚ್ 25 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದಿಂದ ಸಭೆ ಕರೆದು ಆ ಸಭೆಯಲ್ಲಿ ನಾಲ್ಕು ನಿಗಮದ ಸಾರಿಗೆ ಮುಷ್ಕರದ (KSRTC Strike) ದಿನಾಂಕವನ್ನು ಘೋಷಣೆ ಮಾಡುತ್ತೇವೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ಮಾಹಿತಿ ನೀಡಿದ್ದಾರೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

  • ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ನೀಡಬೇಕು (7 ನೇ ವೇತನ ಆಯೋಗ ಜಾರಿಯಾಗಬೇಕು).
  • 38 ತಿಂಗಳ ವೇತನ ಹಿಂಬಾಕಿ ನೀಡಬೇಕು.
  • ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಬೇಕು.
  • 2021 ರ ವೇಳೆಯಲ್ಲಿ ಮುಷ್ಕರದ ವಜಾಗೊಂಡ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು.

ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಬುಧವಾರವಷ್ಟೇ ಸಭೆ ನಡೆಸಿ, ನಾಲ್ಕು ಬೇಡಿಕೆಗಳನ್ನು ಈಡೇರಿಸಲು 22 ರ ವರೆಗೆ ಸರ್ಕಾರಕ್ಕೆ ಗಡುವು ನೀಡಿದೆ. ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ ಅಂದರೆ 25 ರಂದು ಸಭೆ ಕರೆದು ಖಾಸಗಿ ಸಾರಿಗೆ ಮುಷ್ಕರಕ್ಕೆ ಕರೆ ನೀಡುವ ಎಚ್ಚರಿಕೆ ನೀಡಿದೆ. ಇದೀಗ ಅದರ ಬೆನ್ನಲ್ಲೇ ಕೆಎಸ್​ಆರ್​ಟಿಸಿ,ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. ಮೊದಲ ಹಂತದಲ್ಲಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನಂತರ ಮುಷ್ಕರ ನಡೆಸಲಿದ್ದೇವೆ ಎಂದುಸಾರಿಗೆ ನೌಕರರ ಮುಖಂಡ ನಾಗರಾಜ್ ಹೇಳಿದ್ದಾರೆ.ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಎರಡು ಡೆಡ್​​​ಲೈನ್​ಗಳಿಂದ ಡಬಲ್ ಶಾಕ್ ಎದುರಾಗಿದ್ದು, ಮಾರ್ಚ್​ 22 ರೊಳಗೆ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತದೆಯಾ ಅಥವಾ ಸಂಘಟನೆಗಳು ಮುಷ್ಕರಕ್ಕೆ ಮುಂದಾಗುತ್ತವೆಯೇ ಎಂದು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button