ದೇಶರಾಜಕೀಯಸುದ್ದಿ

ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ, ಪ್ರತಿಭಟನೆ

ಸ್ವತಃ ಬಿಜೆಪಿ ಕಾರ್ಯಕರ್ತರೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಣಿಪುರದಲ್ಲಿ ಭಾನುವಾರ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಅನೇಕ ನಾಯಕರಲ್ಲಿ ಅಸಮಾಧಾನ ಮೂಡಿಸಿದ್ದು, ಅವರ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ಕಚೇರಿಗಳಲ್ಲಿ ದಾಂದಲೆ ನಡೆದಿದೆ. ಇನ್ನು ಕೆಲವೆಡೆ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ನೆರೆದಿದ್ದಾರೆ. ಇಂಫಾಲದಲ್ಲಿನ ಬಿಜೆಪಿ ಕೇಂದ್ರ ಕಚೇರಿಗೆ ಭಾರಿ ಬಂದೋಬಸ್ತ್ ಒದಗಿಸಲಾಗಿದೆ.
ಮಣಿಪುರ ಅಭಿವೃದ್ಧಿಯಾಗಬೇಕಾದರೆ ತಾವರೆ ಅರಳಬೇಕು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ
ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಅನೇಕ ನಾಯಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಪಕ್ಷ ತೊರೆದ ನಾಯಕರ ನಿಖರ ಸಂಖ್ಯೆ ಇನ್ನೂ ಗೊತ್ತಾಗಿಲ್ಲ. ಕಾಂಗ್ರೆಸ್‌ ತೊರೆದು ಪಕ್ಷಾಂತರ ಮಾಡಿದ ಮುಖಂಡರಿಗೆ ಮಣೆ ಹಾಕುವುದಕ್ಕಾಗಿ ತಮಗೆ ಟಿಕೆಟ್ ನೀಡದೆ ಇರುವುದರ ವಿರುದ್ಧ ಬಹುತೇಕ ನಾಯಕರು ರೊಚ್ಚಿಗೆದ್ದಿದ್ದಾರೆ.

2017ರ ಚುನಾವಣೆಯಲ್ಲಿ ಬಿಜೆಪಿ ಕೇವಲ 21 ಸೀಟುಗಳಲ್ಲಿ ಗೆಲುವು ಕಂಡಿದ್ದರೂ, ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿತ್ತು. ಇವರಲ್ಲಿ 19 ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಇಬ್ಬರನ್ನು ಮಾತ್ರ ಕೈಬಿಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹೊರಗಿನಿಂದ ಬಂದವರಿಗೆ ಟಿಕೆಟ್
ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲ 60 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಅದು ಭಾನುವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಪಕ್ಷ ಸೇರಿದ 16 ಕಾಂಗ್ರೆಸ್ ಶಾಸಕರ ಪೈಕಿ, ಕನಿಷ್ಠ 10 ಮಂದಿಗೆ ಟಿಕೆಟ್ ನೀಡಿದೆ. ಆದರೆ ಈ ಪಟ್ಟಿಯಲ್ಲಿ ಕೇವಲ ಮೂವರು ಮಹಿಳೆಯರಿದ್ದಾರೆ. ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ಮಣಿಪುರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಗೋವಿಂದಾಸ್ ಕೊಂತೌಜಮ್ ಅವರಿಗೆ ಟಿಕೆಟ್ ದೊರಕಿದೆ.

ಸಿಎಂ ಬೀರೆನ್ ಸಿಂಗ್ ಅವರ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಹೀನ್‌ಗಂಗ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಮತ್ತೊಬ್ಬ ಪ್ರಮುಖ ಸಚಿವ ಬಿಸ್ವಜಿತ್ ಸಿಂಗ್ ಅವರು ತೊಂಗ್ಜು ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಮುಖ್ಯಮಂತ್ರಿಗಳ ನಿಷ್ಠರಲ್ಲಿ ಹೆಚ್ಚಿನವರಿಗೆ ಟಿಕೆಟ್ ಸಿಕ್ಕಿದೆ. ಆದರೆ ಕಾಂಗ್ರೆಸ್ ಬಿಟ್ಟು ಬಂದವರಿಗೆ ಟಿಕೆಟ್ ನೀಡಿ, ಪಕ್ಷದ ಒಳಗಿನ ನಾಯಕರನ್ನು ಕಡೆಗಣಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡು ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸರ್ಕಾರ ರಚಿಸಿತ್ತು. ಆದರೆ ಚುನಾವಣೆಗೆ ಅದು ಮೈತ್ರಿ ಮಾಡಿಕೊಂಡಿಲ್ಲ.

Related Articles

Leave a Reply

Your email address will not be published. Required fields are marked *

Back to top button