ವಿದೇಶ

ಇಂಗ್ಲೆಂಡ್‌ನಲ್ಲಿ Omicronನಿಂದ 75,000 ಜನ ಸಾಯುವ ಸಂಭವ..!

ಕೊರೋನಾ ವೈರಸ್(coronavirus) ರೂಪಾಂತರ ಓಮೈಕ್ರಾನ್ ನಿಂದಾಗಿ ಬ್ರಿಟನ್(Britain) ತತ್ತರಿಸಿ ಹೋಗಿದ್ದು, ಈ ಸೋಂಕಿನ ವಿರುದ್ಧ ಹೋರಾಡಲು ಹೆಚ್ಚಾಗಿ ಬೂಸ್ಟರ್ ಲಸಿಕೆಗಳನ್ನು ತೆಗೆದುಕೊಳ್ಳುವಂತೆ  ಪ್ರಧಾನಿ ಬೋರೀಸ್ ಜಾನ್ಸನ್ (Prime Minister Boris Johnson ) ಅವರು ತಿಳಿಸಿದ್ದಾರೆ. ಇದಲ್ಲದೇ ಓಮೈಕ್ರಾನ್(Omicron) ರೂಪದಲ್ಲಿ ಮೂರನೇ ಅಲೆ (Third wave) ಬ್ರಿಟನ್‌ಗೆ ಅಪ್ಪಳಿಸಲಿದೆ ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಲಸಿಕೆಯ ಮೂರನೇ ಡೋಸ್
18 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆಯ ಮೂರನೇ ಡೋಸ್ ಅನ್ನು ನೀಡುವುದಾಗಿ ಜಾನ್ಸನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು ಓಮೈಕ್ರಾನ್ ತುರ್ತು ಪರಿಸ್ಥಿತಿಯಿಂದಾಗಿ ಈ ತಿಂಗಳ ಕೊನೆಯಲ್ಲಿ ಬ್ರಿಟನ್‌ನ ಸಂಪೂರ್ಣ ಜನತೆಗೆ ಲಸಿಕೆಗಳನ್ನು ನೀಡುವುದಾಗಿ ಹೇಳಿದ್ದಾರೆ.

ಈ ಹಿಂದೆ ದೇಶವು ಜನವರಿ ಅಂತ್ಯವನ್ನು ಲಸಿಕೆಗಳನ್ನು ಸಂಪೂರ್ಣವಾಗಿ ನೀಡುವುದಕ್ಕೆ ಗುರಿಯಾಗಿಸಿಕೊಂಡಿತ್ತು. ಹೆಚ್ಚು ಪ್ರಸರಣಗೊಳ್ಳುವ ರೂಪಾಂತರವು ಬ್ರಿಟನ್‌ನಲ್ಲಿ ಎರಡರಿಂದ ಮೂರು ದಿನಗಳಲ್ಲಿ ದುಪ್ಪಟ್ಟುಗೊಳ್ಳುತ್ತದೆ ಎಂದು ಬೋರೀಸ್ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿಜ್ಞಾನಿಗಳು ಭರವಸೆ
ನಮಗೆ ಅಗತ್ಯವಾಗಿರುವ ಸಂರಕ್ಷಣೆಯನ್ನು ಪಡೆಯಲು ಲಸಿಕೆಯ ಎರಡು ಡೋಸ್ ಮಾತ್ರ ಸಾಲದು ಎಂಬ ಅಂಶವನ್ನು ಪ್ರಸ್ತುತ ನಾನು ಕಂಡುಕೊಂಡಿದ್ದೇನೆ ಎಂದು ಬೋರೀಸ್ ತಿಳಿಸಿದ್ದಾರೆ. ಮೂರನೇ ಡೋಸ್‌ನಿಂದ ರೂಪಾಂತರವನ್ನು ನಿಗ್ರಹಿಸಬಹುದು ಎಂಬುದಾಗಿ ವಿಜ್ಞಾನಿಗಳು ಭರವಸೆ ನೀಡಿದ್ದಾರೆ ಎಂಬುದಾಗಿಯೂ ಇಂಗ್ಲೆಂಡ್ ಪ್ರಧಾನಿ ತಿಳಿಸಿದ್ದಾರೆ. ನಮ್ಮ ಸಂರಕ್ಷಣಾ ಬ್ಯಾಕಪ್ ಅನ್ನು ನಾವು ಬೂಸ್ಟರ್ ಲಸಿಕೆಗಳ ಮೂಲಕ ಮರಳಿ ಪಡೆಯಬಹುದೆಂಬ ಆಶಾಭಾವನೆ ನನಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಲಸಿಕೆಗಳ ವಿತರಣೆ
ಬೂಸ್ಟರ್ ಲಸಿಕೆಗಳನ್ನು ಒದಗಿಸಲು ಬೋರೀಸ್ ನ್ಯಾಶನಲ್ ಮಿಶನ್ ಯೋಜನೆಯನ್ನು ಹಮ್ಮಿಕೊಂಡಿದ್ದು ಲಸಿಕೆ ಕೇಂದ್ರಗಳು ಹಾಗೂ ವಾರದ ಏಳು ದಿನಗಳ ಕಾಲ ಮಿಲಿಟರಿ ಯೋಜಕರು ಅಂತೆಯೇ ಸಾವಿರಾರು ಲಸಿಕೆ ಸ್ವಯಂಸೇವಕರ ಸಹಾಯದೊಂದಿಗೆ ಬೂಸ್ಟರ್ ಲಸಿಕೆಗಳ ವಿತರಣೆಯನ್ನು ಮಾಡಲಾಗುತ್ತದೆ ಎಂದಿದ್ದಾರೆ. ಜಾನ್ಸನ್ ಅವರ ಡಿಸೆಂಬರ್ 31 ರ ಟಾರ್ಗೆಟ್ ಇಂಗ್ಲೆಂಡ್‌ಗೂ ಅನ್ವಯಿಸುತ್ತದೆ. ಇಂಗ್ಲೆಂಡ್‌ನ ಇತರ ಭಾಗಗಳಾದ ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಐರ್ಲ್ಯಾಂಡ್‌ನ ಉತ್ತರ ಭಾಗ ತಮ್ಮ ಲಸಿಕೆ ಕ್ಯಾಂಪೇನ್‌ಗಳನ್ನು ವೇಗಗೊಳಿಸುವ ಆಶಾಭಾವನೆ ಹೊಂದಿವೆ.

ವಯಸ್ಕರ ಮೂರು ಡೋಸ್‌
12 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು 80% ಕ್ಕಿಂತಲೂ ಹೆಚ್ಚಿನ ಜನರು ಲಸಿಕೆಗಳ ಎರಡೂ ಡೋಸ್‌ಗಳನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದು, 40% ದಷ್ಟು ವಯಸ್ಕರು ಮೂರು ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ವೈದ್ಯಕೀಯ ವರದಿ ಉಲ್ಲೇಖಿಸಿದೆ. ಮುಂದಿನ ಮೂರು ದಿನಗಳಲ್ಲಿ ಬೂಸ್ಟರ್ ಲಸಿಕೆಗಳನ್ನು ಉಳಿದವರಿಗೆ ನೀಡುವುದು ಸವಾಲಿನ ವಿಷಯವಾಗಿದ್ದು ಹೆಚ್ಚುಕಡಿಮೆ ದಿನವೊಂದಕ್ಕೆ 1 ಮಿಲಿಯನ್ ಡೋಸ್‌ಗಳ ಅಗತ್ಯವಿದೆ. ಈ ಗುರಿಯನ್ನು ತಲುಪುವುದಕ್ಕಾಗಿಯೇ ಕೆಲವೊಂದು ದೈನಂದಿನ ವೈದ್ಯಕೀಯ ನಿಯಮಗಳನ್ನು ಮುಂದೂಡಲಾಗಿದೆ ಎಂಬುದಾಗಿ ಬೋರೀಸ್ ತಿಳಿಸಿದ್ದಾರೆ.

ಮೂರನೇ ಅಲೆಯ ಎಚ್ಚರಿಕೆ
ಇಂಗ್ಲೆಂಡ್‌ಗೆ ಓಮೈಕ್ರಾನ್ ರೂಪಾಂತರ ಮೂರನೇ ಅಲೆಯ ಮೂಲಕ ಹೆಚ್ಚಿನ ಅಪಾಯವನ್ನು ತಂದೊಡ್ಡಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಜಾನ್ಸನ್ ಘೋಷಣೆ ಹೊರಬಿದ್ದಿದೆ. ಓಮೈಕ್ರಾನ್ ರೂಪಾಂತರವು ಹೆಚ್ಚಳವಾಗಲಿದ್ದು ಇದು ಸಾರ್ವಜನಿಕರಿಗೆ ಹಾಗೂ ಆರೋಗ್ಯ ಪರಿಚಾರಕರಿಗೆ ಅಪಾಯವನ್ನುಂಟು ಮಾಡಲಿದೆ ಎಂಬುದಾಗಿ ಪ್ರಮುಖ ವೈದ್ಯಕೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಡೆಲ್ಟಾಗಿಂತ ಹೆಚ್ಚು ವೇಗದಲ್ಲಿ ಓಮೈಕ್ರಾನ್ ಹರಡುತ್ತಿದ್ದು ಲಸಿಕೆಗಳು ಕಡಿಮೆ ಪರಿಣಾಮವನ್ನು ಬೀರಲಿವೆ ಎಂಬುದಾಗಿ ವೈದ್ಯರು ಈ ಹಿಂದೆ ತಿಳಿಸಿದ್ದರು. ಕೆಲವೇ ದಿನಗಳಲ್ಲಿ ಡೆಲ್ಟಾವನ್ನು ಹಿಂದಿಕ್ಕಿ ಓಮೈಕ್ರಾನ್ ಇಂಗ್ಲೆಂಡ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲಿದೆ ಎಂಬುದಾಗಿ ಬ್ರಿಟಿಷ್ ಮೂಲಗಳು ಉಲ್ಲೇಖಿಸಿವೆ.

ಎಚ್ಚರಿಕೆಯ ಘಂಟೆ ಬಾರಿಸಿದ ಹೊಸ ಅಧ್ಯಯನ
ಸೂಕ್ತ ಕ್ರಮಗಳನ್ನು ಜರುಗಿಸದೇ ಇದ್ದಲ್ಲಿ ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಓಮೈಕ್ರಾನ್ ನಿಂದ ಇಂಗ್ಲೆಂಡ್‌ನಲ್ಲಿ 25,000 ದಿಂದ 75,000 ಸಾವುಗಳು ಸಂಭವಿಸಬಹುದು ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ. ಶನಿವಾರವಷ್ಟೇ ದೇಶದಲ್ಲಿ 600 ಹೊಸ ಪ್ರಕರಣಗಳನ್ನು ದೃಢೀಕರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button