ಕೋಲಾರ:ಆಧುನಿಕ ಜಗತ್ತು ಮುಂದುವರೆಯುತ್ತಿದ್ದಂತೆ ಮನುಷ್ಯರು ಕಾಲ ಕಾಲಕ್ಕೆ ಬದಲಾಗುತ್ತಾ ಮುನ್ನೆಡೆಯುತ್ತಿದ್ದಾರೆ, ಆದರೆ ನಮ್ಮಲ್ಲಿ ಇನ್ನೂ ಆಚರಣೆಯಲ್ಲಿರುವ ಮೂಡ ನಂಬಿಕೆಗಳು (Superstition) ಅಲ್ಲಲ್ಲಿ ಹಾಗೆಯೇ ಉಳಿದುಕೊಂಡಿದೆ, ಹಲವು ವರ್ಷಗಳ ಹಿಂದೆ ಮೇಲ್ವರ್ಗದ ಜನರು ಕೆಳವರ್ಗದ ಜನರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದ್ದ ಘಟನೆಗಳು ಈಗ ಕಾಣೆಯಾಗಿದ್ದರು, ಆಗಾಗ ಇಂತಹ ಸಂದರ್ಭಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ. ಅಸ್ಪೃಶ್ಯತೆಯ (Untouchability) ಆಚರಣೆಗಳಿಗೆ ನಿಷೇದ ಹೇರಿದ್ದರು, ಅಂತಹ ಘಟನೆ ಕೋಲಾರದ ಮಾಲೂರಿನಲ್ಲಿ (Maluru, Kolar) ತಡವಾಗಿ ಬೆಳಕಿಗೆ ಬಂದಿದೆ.
ಹಲವು ವರ್ಷಗಳಿಂದ ಅಸ್ಪೃಶ್ಯತೆ
ಮಾಲೂರಿನ ಮೈಲಾಂಡಹಳ್ಳಿ ಗ್ರಾಮದಲ್ಲಿ ದಲಿತರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದ್ದು, ಗ್ರಾಮದಲ್ಲಿನ ಏಕೈಕ ಕ್ಷೌರಿಕ ಮಳಿಗೆಯಲ್ಲು ದಲಿತರಿಗೆ ಕಟಿಂಗ್ ಶೇವಿಂಗ್ ಮಾಡದಂತೆಯು ಒತ್ತಡ ಹೇರಲಾಗಿದೆ, ಗ್ರಾಮದಲ್ಲಿ ಹಲವು ವರ್ಷಗಳಿಂದ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದ್ದು ಕಳೆದ ಎರಡು ದಿನಗಳ ಹಿಂದಷ್ಟೆ ಇದಕ್ಕೆ ಬಲಿಯಾಗಿದ್ದ ದಲಿತರ ಆಕ್ರೋಶ ಹೊಡೆದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆ
ಕಳೆದ ಭಾನುವಾರ ಗ್ರಾಮದ ಮಾರಿಕಾಂಬ ದೇಗುಲದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಎಂದಿನಂತೆ ಗ್ರಾಮದ ಮಹಿಳೆಯರು ಮಾರಿಕಾಂಬ ಅಮ್ಮನವರಿಗೆ ದೀಪ ಬೆಳಗಲು ಮುಂದಾದಾಗ ದೇಗುಲ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.
ದೇಗುಲದ ಅರ್ಚಕ ನಾರಾಯಣಪ್ಪ, ಕೃಷ್ಣಪ್ಪ ಹಾಗೂ ಇನ್ನು ಕೆಲವರು ದೇಗುಲ ಪ್ರವೇಶ ಮಾಡದಂತೆ ಹೇಳಿ, ಒಳಗೆ ಬಂದಿದ್ದವರನ್ನು ಹೊರಗೆ ಕಳಿಸಿದ್ದಾರಂತೆ, ತಮ್ಮವರನ್ನ ಹೊರಗೆ ಕಳಿಸಿದ್ದು ಯಾಕೆಂದು ಪ್ರಶ್ನಿಸಿದಾಗ, ಕೆಳಜಾತಿಯವರು ಒಳಗೆ ಬರಬಾರದೆಂದು ಹೇಳಿ ಕಳಿಸಿದ್ದಾರೆ, ಇದಕ್ಕೆ ಆಕ್ರೋಶಗೊಂಡ ಗ್ರಾಮದ ತಿಮ್ಮರಾಯಪ್ಪ ಎನ್ನುವರು ನಾರಾಯಣಪ್ಪ ಹಾಗು ಹಲವರೊಂದಿಗೆ ವಾಗ್ವಾದ ನಡೆಸಿ, ಜಗಳ ಮಾಡಿದ್ದಾರೆ.
ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಅರ್ಚಕರು
ದಲಿತರನ್ನ ಉದ್ದೇಶ ಪೂರ್ವಕವಾಗಿ ದೇಗುಲ ಪ್ರವೇಶ ಮಾಡದಂತೆ ಮಾಡುತ್ತಾ, ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂದು ದಲಿತರು ಆರೋಪಿಸಿದ್ದಾರೆ. ದೇಗುಲ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದವರು, ತಮ್ಮ ಕ್ರಮದ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದು, ಈ ಹಿಂದೆಯಿಂದ ನಡೆದುಕೊಂಡು ಬಂದಂತೆಯೇ ನಾವು ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂಬ ಸಬೂಬು ನೀಡಿದ್ದಾರೆ.