ಭಾರತ್ ಬಂದ್| ದೆಹಲಿಯಲ್ಲಿ ರೈತರ ಬೃಹತ್ ರ‍್ಯಾಲಿ, ಘಾಜಿಪುರ ಹೆದ್ದಾರಿ ಬಂದ್
ಹೊಸದಿಲ್ಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ವೇಳೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಸಿಂಘು ಗಡಿ ಸೇರಿದಂತೆ ದೆಹಲಿಯ ಗಡಿ ಪ್ರದೇಶಗಳಲ್ಲಿ ಅಸಂಖ್ಯಾತ ರೈತರು ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ದೆಹಲಿ ಮೆಟ್ರೊದ ಕೆಲವು ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಹರಿಯಾಣದ ಕುರುಕ್ಷೇತ್ರದಲ್ಲಿ ದೆಹಲಿ-ಅಮೃತಸರ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಘಾಜಿಪುರ, ಸಿಂಘು ಗಡಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪಂಜಾಬ್-ಹರಿಯಾಣ ಶಂಭು ಗಡಿಯನ್ನು ಮುಚ್ಚಲಾಗಿದೆ.
ರಸ್ತೆ ತಡೆ ನಡೆಸುತ್ತಿರುವ ರೈತರನ್ನು ತೆರವುಗೊಳಿಸಲು ಪೊಲೀಸರು ಯತ್ನಿಸಿದಾಗ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಗ್ನ ವಾತಾವರಣ ತಲೆದೋರಿತು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ರಾಕೇಶ್ ಟಿಕಾಯತ್ ನಾವು ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳು ಜಾರಿಯಾಗಲು ಬಿಡುವುದಿಲ್ಲ. ನಾವು ಇದನ್ನು ವಿರೋಧಿಸಿ ೧೦ ವರ್ಷಗಳ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೂರು ಗಡಿ ಪ್ರದೇಶಗಳಲ್ಲಿಯೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರು ದೆಹಲಿ ಪ್ರವೇಶಿಸದಂತೆ ತಡೆಯಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೇಶದ ವಿವಿಧೆಡೆ ರೈತರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ಧರಣಿ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭಾರತ್ ಬಂದ್ ನೀರಸವಾಗಿತ್ತು. ಕೆಲವೆಡೆ ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪಂಜಾಬ್, ಹರಿಯಾಣ, ಬಿಹಾರ್, ಜಾರ್ಖಂಡ್, ಆಂಧ್ರಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಿದ ಬಗ್ಗೆ ವರದಿಯಾಗಿದೆ.