ರೈಲಿನ ಮೇಲೆ ಬಲೂಚ್ ಉಗ್ರರ ದಾಳಿ; ಒತ್ತೆಯಾಳುಗಳಾಗಿ 100ಕ್ಕೂ ಹೆಚ್ಚು ಪ್ರಯಾಣಿಕರು, ಎಲ್ಲರನ್ನೂ ಕೊಲ್ಲುವ ಬೆದರಿಕೆ!

ಬಲೂಚಿಸ್ತಾನ: ಪಾಕಿಸ್ತಾನ ರೈಲ್ವೆಯ ‘ಜಾಫರ್ ಎಕ್ಸ್‌ಪ್ರೆಸ್ʼ ಪ್ರಯಾಣಿಕ ರೈಲನ್ನು ಬಲೂಚ್ ಲಿಬರೇಶನ್ ಆರ್ಮಿಯ (Balochistan Liberation Army) ಉಗ್ರರು ಅಪಹರಿಸಿದ್ದಾರೆ. ರೈಲಿನಲ್ಲಿದ್ದ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ. ಈ ವೇಳೆ 6 ಮಂದಿ ಸೇನಾ ಸಿಬ್ಬಂದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ.ರೈಲನ್ನು ಅಪಹರಿಸಿರುವ ಉಗ್ರರು, ಮಹಿಳೆಯರು, ಮಕ್ಕಳು ಮತ್ತು ಬಲೂಚ್ ಪ್ರಯಾಣಿಕರನ್ನು ಬಿಡುಗಡೆ ಮಾಡಿದೆ. ಸದ್ಯ ಒತ್ತೆಯಾಳುಗಳಾಗಿರುವವರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಮತ್ತು ಇತರ ಭದ್ರತಾ ಸಂಸ್ಥೆಗಳ ಸದಸ್ಯರು ಎನ್ನಲಾಗಿದೆ. ಪರಿಸ್ಥಿತಿ ನಿಭಾಯಿಸಲು ಪಾಕಿಸ್ತಾನ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.ಉಗ್ರರು ರೈಲ್ವೆ ಹಳಿಯನ್ನು ಸ್ಫೋಟಿಸಿ ಕ್ವೆಟ್ಟಾದಿಂದ ಪೆಶಾವರಕ್ಕೆ ಹೋಗುತ್ತಿದ್ದ ರೈಲನ್ನು ತಡೆದು ನಿಲ್ಲಿಸಿದ್ದಾರೆ. ನಂತರ 400 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ‘ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರೈಲ್ವೆ ಹಳಿಯನ್ನು ಸ್ಫೋಟಿಸಿದ್ದಾರೆ. ಜಾಫರ್ ಎಕ್ಸ್‌ಪ್ರೆಸ್ ರೈಲು ನಿಲ್ಲುವಂತೆ ಮಾಡಿದ್ದಾರೆ. ಹೋರಾಟಗಾರರು ರೈಲನ್ನು ವಶಪಡಿಸಿಕೊಂಡು ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆʼ ಎಂದು ಬಲೂಚ್ ವಿಮೋಚನಾ ಸೇನೆಯ ಉಗ್ರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.‘ಸೇನಾ ಪಡೆಗಳು ಮಿಲಿಟರಿ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿದರೆ, ಪರಿಣಾಮಗಳು ತೀವ್ರವಾಗಿರುತ್ತವೆ. ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು. ಈ ರಕ್ತಪಾತಕ್ಕೆ ಭದ್ರತಾ ಪಡೆಗಳು ಮಾತ್ರ ಜವಾಬ್ದಾರರಾಗಿರುತ್ತವೆʼ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.