ಮಂಡ್ಯ ಇದೀಗ ರಾಜಕೀಯ ಕೆಂಡ,
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಹೈವೋಲ್ಟಜ್ ಕ್ಷೇತ್ರವಾಗಿ ಪರಿಣಮಿಸಿದೆ. ಬಿಜೆಪಿ-ಜೆಡಿ ಎಸ್ ಮೈತ್ರಿಕೂಟ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ. ಹಾಲಿ ಸಂಸದೆ ಸುಮಲತಾ ಅಂಬರೀಶ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಅವರಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಆದರೆ ಈಗಾಗಲೇ ಕಾಂಗ್ರೆಸ್ ಪಕ್ಷ ಉದ್ಯಮಿ ವೆಂಟಕಣೇಗೌಡ (ಸ್ಟಾರ್ ಚಂದ್ರು) ಅವರನ್ನು ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿಸತೊಡಗಿದೆ. ಈ ಮಧ್ಯೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂಬುದಾಗಿ ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರ ಹೆಸರು ಕೂಡ ತಳಕು ಹಾಕಿಕೊಂಡಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಗ್ಗಂಟಾದ ಸುಮಲತಾ:
ಬಿಜೆಪಿ -ಜೆಡಿಎಸ್ ಮೈತ್ರಿಕೂಟದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಜೆಡಿಎಸ್ ಗೆ ಬಿಟ್ಟುಕೊಡುವಂತೆ ಮಾಜಿ ಸಿಎಂ.ಎಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ವರಿಷ್ಟರನ್ನುಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಗೆ ಮಂಡ್ಯದಿಂದ . ಸ್ಪರ್ಧೆಮಾಡಲು ಅನುವು ಮಾಡಿಕೊಡುವಂತೆ, ಅದರಲ್ಲೂ ತಾವೇ ಬಿಜೆಪಿ ಅಭ್ಯರ್ಥಿಯಾಗುವುದಾಗಿ ಹೇಳಿದ್ದು, ತಮಗೆ ಟಿಕೆಟ್ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಇದು ಮೈತ್ರಿ ಟಿಕೆಟ್ ಆಯ್ಕೆಗೆ ಕಗ್ಗಂಟಾಗಿದೆ.
ಸುಮಲತಾ ಬೆಂಬಲಿಗರ ಸಭೆ: ಲೋಕಸಭೆ ಚುನಾವಣೆ
ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಬೆಂಗಳೂರಿನಲ್ಲಿ ಭಾನುವಾರ ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಇದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ,ಈ ಹಿಂದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷವೂ ಪ್ರಧಾನಿಯಾಗಿರಬೇಕು ಎಂದು ಭಾಷಣ ಮಾಡಿಕೊಂಡು ಬರುತ್ತಿದ್ದರು. ಈಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಗೆ ಮಂಡ್ಯ ಬಿಟ್ಟುಕೊಡುವಂತೆ ಪಟ್ಟು ಹಾಕಿರುವ ಹಿನ್ನೆಲೆ ಸುಮಲತಾ ಅವರನ್ನೇ ಬಿಜೆಪಿ ಕೈಬಿಡುವ ಸ್ಥಿತಿ ಇದೆ. ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ, ಸುಮಲತಾಗೆ ಕ್ಷೇತ್ರ ಇಲ್ಲವಾಗುತ್ತದೆ. ಅವರಿಗೆ ಬೇರೆ ಯಾವ ಪಕ್ಷವೂ ಟಿಕೆಟ್ ಕೊಡುವ ಲಕ್ಷಣಗಳು ಗೋಚರಿಸುತ್ತಿಲ್ಲ, ಮತ್ತೊಂದೆಡೆ ಸುಮಲತಾ ಕಾಂಗ್ರೆಸ್ ಗೆ ಬರುತ್ತಾರೆಂಬವದಂತಿಗಳು ಕೇಳಿಬರುತ್ತಿವೆ. ಆದರೆ ಕಾಂಗ್ರೆಸ್ ಪಕ್ಷದಿಂದ ಮಂಡ್ಯ ಕ್ಷೇತ್ರಕ್ಕೆ ಈಗಾಗಲೇ ಸಂಭಾವ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಷ್ಟೇ. ಈ ಹಂತದಲ್ಲಿ ಸುಮಲತಾ ಅವರನ್ನು ಕರೆತಂದು ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ದರ್ಶನ್ ಸಾರಥ್ಯ:
ನನ್ನ ಸ್ಪರ್ಧೆ ಮಂಡ್ಯದಲ್ಲೇ ಎನ್ನುತ್ತಲೇ ಬಿಜೆಪಿ ಟಿಕೆಟ್ ಗೆ ಪಟ್ಟು ಹಿಡಿದಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಚಿತ್ರನಟ ದರ್ಶನ್ ತೂಗುದೀಪ ಅವರು ಸುಮಲತಾ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸಾರಥ್ಯ ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್ ಕಾರ್ಯಕ್ರಮ ಮಂಡ್ಯ ಜಿಲ್ಲೆಯಲ್ಲೇ ನಡೆಯುತ್ತಿವೆ.
ಮೈತ್ರಿಕೂಟ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಥವಾ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕಣಕ್ಕಿಳಿದರೆ, ಹಾಲಿ ಸಂಸದೆ ಸುಮಲತಾ ಅಂಬರೀಶ್ ಹಿಂದಿನ ಚುನಾವಣೆಯಂತೆ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ನಿಂದ ಉದ್ಯಮಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಮಂಡ್ಯ ಕಣ ಹೈವೋಲೈಜ್ ಕ್ಷೇತ್ರವಾಗಿ ಮಾರ್ಪಡಾಗಲಿದೆ.