ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅಮಾನತು …
ಬೆಂಗಳೂರು: ಕುಡಿದ ಮತ್ತಿನಲ್ಲಿ ಹೋಟೆಲ್ವೊಂದರ ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ ಕೆಪಿ ಅಗ್ರಹಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಗೌಡ ಅವರನ್ನು ಅಮಾನತು ಮಾಡಲಾಗಿದೆ.
ಜೀವನ ಭೀಮಾನಗರದಲ್ಲಿ ಹೋಟೆಲ್ವೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಬಾಡಿಗೆಗೆ ರೂಂ ಕೇಳಿದ್ದರು. ಹೋಟೆಲ್ನ ಮಹಿಳಾ ರಿಸೆಪ್ಷನಿಸ್ಟ್ ರೂಂ ಇಲ್ಲ ಎಂದು ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಗೋಪಾಲಕೃಷ್ಣ, ಕುಡಿದ ಮತ್ತಿನಲ್ಲಿ ಮಹಿಳಾ ಸಿಬ್ಬಂದಿ ಜತೆ ಜಗಳ ಮಾಡಿ, ಅನುಚಿತವಾಗಿ ವರ್ತಿಸಿದ್ದರು. ನಂತರ ಹೋಟೆಲ್ ಸಿಬ್ಬಂದಿ ಗೋಪಾಲಕೃಷ್ಣನನ್ನು ಹೊರಗೆ ಕಳುಹಿಸಿದ್ದರು.
ಇದಾದ ಬಳಿಕ ಇನ್ಸ್ಪೆಕ್ಟರ್ ವಿರುದ್ಧ ಹೋಟೆಲ್ ಮ್ಯಾನೇಜರ್ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೆದ್ಗೆ ಮಾಹಿತಿ ನೀಡಿದ್ದರು. ಜತೆಗೆ ಇನ್ಸ್ಪೆಕ್ಟರ್ ಮಹಿಳಾ ಸಿಬ್ಬಂದಿ ಜತೆಗೆ ಅನುಚಿತವಾಗಿ ವರ್ತಿಸಿರುವುದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ, ಮೊಬೈಲ್ ವಿಡಿಯೋ ನೀಡಿ ಈ ಸಂಬಂಧ ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ಪ್ರಕರಣ ದಾಖಲಾಗಿತ್ತು. ಭೀಮಾ ಶಂಕರ್ ಗುಳೆದ್ ಈ ಕುರಿತು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಅವರನ್ನು ಅಮಾನತುಗೊಳಿಸಲಾಗಿದೆ.