
ರಾಜ್ಯಾದ್ಯಂತ ಅಭಿಮಾನಿಗಳು ನಟ ಪುನೀತ್ ರಾಜ್ಕುಮಾರ್ ಜನ್ಮದಿನವನ್ನು ಆಚರಿಸುತ್ತಿದ್ದಾರೆ. 50ನೇ ವರ್ಷದ ಬರ್ತ್ಡೇ ಆದ್ದರಿಂದ ಈ ಬಾರಿ ಸ್ಪೆಷಲ್ ಆಗಿದೆ. ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬದವರು ಹಾಗೂ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ‘ಅಪ್ಪು’ ಸಿನಿಮಾ ಕೂಡ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ.‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು (ಮಾರ್ಚ್ 17) ಅದ್ದೂರಿಯಾಗಿ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಈಗ ಅವರಿಲ್ಲದೇ ಜನ್ಮದಿನ ಆಚರಿಸುವಂತಾಗಿದೆ. ಪ್ರತಿ ವರ್ಷ ಮಾರ್ಚ್ 17 ಬಂತೆಂದರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಪುನೀತ್ ರಾಜ್ಕುಮಾರ್ ಬರ್ತ್ಡೇ (Puneeth Rajkumar Birthday) ಪ್ರಯುಕ್ತ ಹಲವಾರು ಬಗೆಯ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಬಗೆಯ ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಪುನೀತ್ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಸ್ಮರಿಸಲಾಗುತ್ತಿದೆ.ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್ಕುಮಾರ್ ಅವರು ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಬಾಲನಟನಾಗಿಯೇ ಅಭಿಮಾನಿಗಳ ಮನಗೆದ್ದ ಅವರು ಹೀರೋ ಆಗಿ ಕೂಡ ಗಟ್ಟಿಯಾಗಿ ನೆಲೆನಿಂತರು. ಅಭಿನಯ, ಡ್ಯಾನ್ಸ್, ಫೈಟಿಂಗ್ನಲ್ಲಿ ಅಪ್ಪು ಅವರಿಗೆ ಸರಿಸಾಟಿ ಯಾರಿಲ್ಲ. ಅದೇ ರೀತಿ ಜನಪರ ಕಾರ್ಯಗಳ ಮೂಲಕ ಕೂಡ ಅವರು ರಿಯಲ್ ಹೀರೋ ಎನಿಸಿಕೊಂಡರು. ಆ ಗುಣಗಳು ಅಭಿಮಾನಿಗಳಿಗೆ ಮಾದರಿ ಆಗಿವೆ.ಇದು 50ನೇ ವರ್ಷದ ಹುಟ್ಟುಹಬ್ಬ ಆದ್ದರಿಂದ ಪುನೀತ್ ರಾಜ್ಕುಮಾರ್ ಅವರು ಮೊದಲ ಸಿನಿಮಾ ‘ಅಪ್ಪು’ ಮರು ಬಿಡುಗಡೆ ಆಗಿದೆ. ಕಳೆದ ಶುಕ್ರವಾರ (ಮಾರ್ಚ್ 14) ರೀ-ರಿಲೀಸ್ ಆದ ‘ಅಪ್ಪು’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆ ಮೂಲಕ ಅಪ್ಪು ಮೇಲಿನ ಅಭಿಮಾನ ಎಂದಿಗೂ ಕಡಿಮೆ ಆಗಲ್ಲ ಎಂಬುದನ್ನು ಫ್ಯಾನ್ಸ್ ಸಾಬೀತು ಮಾಡಿದ್ದಾರೆ. ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ರಮ್ಯಾ, ಶರ್ಮಿಳಾ ಮಾಂಡ್ರೆ, ಸಂತೋಷ್ ಆನಂದ್ ರಾಮ್, ರಕ್ಷಿತಾ ಪ್ರೇಮ್, ಯುವ ರಾಜ್ಕುಮಾರ್ ಸೇರಿದಂತೆ ಹಲವರು ಸಿನಿಮಾ ನೋಡಿದ್ದಾರೆ.ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿ ಕೂಡ ಪುನೀತ್ ರಾಜ್ಕುಮಾರ್ ಅವರು ಸಕ್ರಿಯರಾಗಿದ್ದರು. ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಅವರು ಮಹತ್ವದ ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದ್ದರು. ಆ ಕಾಯಕವನ್ನು ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮುಂದುವರಿಸುತ್ತಿದ್ದಾರೆ. ಇಂದು ಜನ್ಮದಿನದ ಪ್ರಯುಕ್ತ ಅನೇಕರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದವರು ಕೂಡ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.