
ಮತಗಳ್ಳತನ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡುತ್ತಿವೆ. ಈ ಮಧ್ಯೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟದ ನಾಯಕರಿಗೆ ಸೋಮವಾರ ಭೋಜನ ಕೂಟ ಏರ್ಪಡಿಸಿದ್ದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಮತ್ತು ಜಯಾ ಬಚ್ಚನ್, ಡಿಎಂಕೆಯ ಕೆ ಕನಿಮೋಳಿ ಮತ್ತು ಟಿಆರ್ ಬಾಲು, ಆರ್‌ಜೆಡಿಯ ಮಿಸಾ ಭಾರತಿ, ಶಿವಸೇನೆ (ಯುಬಿಟಿ)ಯ ಸಂಜಯ್ ರಾವತ್ ಮತ್ತು ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವು ನಾಯಕರು ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಇಂಡಿಯಾ ಒಕ್ಕೂಟದ ಎಲ್ಲ ಸಂಸದರು ಜೊತೆಗೆ ಎಎಪಿಯ ಸಂಜಯ್ ಸಿಂಗ್ ಮತ್ತು ಸಂದೀಪ್ ಪಾಠಕ್ ಕೂಡ ಖರ್ಗೆ ಅವರ ಭೋಜನ ಕೂಟದಲ್ಲಿ ಕಂಡುಬಂದರು.
ಇತ್ತೀಚೆಗಷ್ಟೇ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಇಂಡಿಯಾ ಒಕ್ಕೂಟದ ಎಲ್ಲ ನಾಯಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಬೆನ್ನಲ್ಲೇ ಖರ್ಗೆ ಅವರು ಕೂಡ ಔತಣಕೂಟ ಏರ್ಪಡಿಸಿದ್ದಾರೆ. ಈ ವೇಳೆ ಮತಗಳ್ಳತನ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಒಟ್ಟಾಗಿ ಹೋರಾಡುವುದಾಗಿ ಎಲ್ಲ ನಾಯಕರು ಪ್ರತಿಜ್ಞೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ 2024ರ ಜೂನ್ನಲ್ಲಿ ಖರ್ಗೆ ಅವರು ತಮ್ಮ ನಿವಾಸಕ್ಕೆ ಇಂಡಿಯಾ ಒಕ್ಕೂಟದ ನಾಯಕರನ್ನು ಆಹ್ವಾನಿಸಿ, ಸಭೆ ನಡೆಸಿದ್ದರು. ಆ ಬಳಿಕ ಇದೀಗ ಮತ್ತೆ ಭೋಜನ ಕೂಟ ಆಯೋಜಿಸಿದರು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಮೂಲಕ ಬಿಜೆಪಿ ನಡೆಸುತ್ತಿದೆ ಎನ್ನಲಾದ ಮತಗಳ್ಳತನದ ಕುರಿತು ಪ್ರದಿಪಾದಿಸಿದರು.
ಇನ್ನು ಮತಗಳ್ಳತನ ವಿರೋಧಿಸಿ ಸೋಮವಾರ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ಸಂಸದರು ಸಂಸತ್ ಭವನದಿಂದ ಚುನಾವಣಾ ಆಯೋಗದ ಮುಖ್ಯ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡಿದ್ದರು. ಆದರೆ ಇದನ್ನು ದೆಹಲಿ ಪೊಲೀಸರು ತಡೆದರು.
ಪೊಲೀಸ್ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಾರೆಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಶಿವಸೇನೆಯ ಸಂಜಯ್ ರಾವತ್ ಮತ್ತು ಟಿಎಂಸಿಯ ಸಾಗರಿಕಾ ಘೋಸ್ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಅನೇಕ ಸಂಸದರು ರಸ್ತೆಯಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು. ಆದರೆ ಕೆಲವು ಮಹಿಳಾ ಸಂಸದರು ಬ್ಯಾರಿಕೇಡ್‌ಗಳನ್ನು ಹತ್ತಲು ಯತ್ನಿಸಿದರು. ಬಳಿಕ ಎಲ್ಲ ನಾಯಕರನ್ನು ಬಿಡುಗಡೆ ಮಾಡಲಾಗಿದೆ.