ಇತ್ತೀಚಿನ ಸುದ್ದಿರಾಜ್ಯಸುದ್ದಿ

ಕರ್ನಾಟಕದಲ್ಲಿ ಮಳೆ ಅನಾಹುತಕ್ಕೆ 2 ತಿಂಗಳಲ್ಲೇ 59 ಮಂದಿ ಬಲಿ

ರಾಜ್ಯ ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಸಾವಿನ ನಗಾರಿ ಬಾರಿಸುತ್ತಿದೆ. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಎರಡು ಸಾವಿನ ಪ್ರಕರಣಗಳೂ ಸೇರಿದಂತೆ ಎರಡು ತಿಂಗಳಿನಲ್ಲಿ ಮಳೆೆಯಿಂದ ಸಂಭವಿಸಿದ ಅವಘಡದಲ್ಲಿ 59 ಮಂದಿ ಪ್ರಾಣ ಬಿಟ್ಟಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಕ್ಕಸ ಮಳೆಯ ರೌದ್ರನರ್ತನ ಮುಂದುವರಿದಿದೆ. ಮಳೆೆ ಹೊಡೆತಕ್ಕೆ ಕರಾವಳಿ ರಾಜ್ಯದ ಹಲವೆಡೆ ಭಾರೀ ಅನಾಹುತಗಳು ನಡೆಯುತ್ತಿವೆ. ಈ ಮಧ್ಯೆ ಎರಡು ತಿಂಗಳಿನಲ್ಲಿ ಇದೇ ಜಿಲ್ಲೆಗಳಲ್ಲಿ 59 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರವೂ ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಮಳೆೆಯಿಂದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಇದರ ಜೊತೆಗೆ ಮಳೆ ಸಂತ್ರಸ್ತರಿಗೆ ವಿಳಂಬ ತೋರದೇ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಮಳೆ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 59

ಕಳೆದ ಎರಡು ತಿಂಗಳಿನಲ್ಲಿ ಮೃತಪಟ್ಟ 59 ಜನರ ಹೊರತಾಗಿ 36 ಮಂದಿ ಗಾಯಗೊಂಡಿದ್ದರೆ, ಐದು ಮಂದಿ ಕಾಣೆಯಾಗಿದ್ದಾರೆ. ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಮಳೆ ಸೃಷ್ಟಿಸಿದ ಅನಾಹುತದಿಂದ 39 ಜನರು ಸಾವಿನ ಮನೆ ಸೇರಿದ್ದಾರೆ. 111 ಗ್ರಾಮಗಳು ವರುಣನ ರೌದ್ರ ನರ್ತನಕ್ಕೆ ತತ್ತರಿಸಿ ಹೋಗಿವೆ.

ಕೆರೆ ಒತ್ತುವರಿ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆೆ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆೆ ಹಾಗೂ ಅನಾಹುತಗಳ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಕೆರೆ ಒತ್ತುವರಿ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಿದ್ದಾರೆ.

ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆೆ ಹೆಚ್ಚಾಗುತ್ತಿದೆ. ಹೀಗಾಗಿ ರಸ್ತೆಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭೂಕುಸಿತದ ಸಾಧ್ಯತೆಗಳಿರುವ ಹಿನ್ನೆಲೆ ಜನರನ್ನು ಸ್ಥಳಾಂತರಿಸಲು ಮತ್ತು ಕುಸಿದ ಅಥವಾ ಹಾನಿಗೊಳಗಾದ ಮನೆಗಳ ಜಂಟಿ ಸಮೀಕ್ಷೆಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಪದೇ ಪದೇ ಭೂಕುಸಿತ ಸಂಭವಿಸುತ್ತಿರುವ ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ. ತಹಶೀಲ್ದಾರ್‌ಗಳು ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಕ್ರಮಗಳ ಕುರಿತು ಮೇಲ್ವಿಚಾರಣೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಆಗಸ್ಟ್ 6ರವರೆಗೂ ಮಳೆ ಮುಂದುವರಿಕೆ

ವರುಣನ ಕೋಪಕ್ಕೆ ಕಂಗಾಲಾಗಿರುವ ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಆಗಸ್ಟ್ 6ರವೆರೆಗೂ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಅದೇ ರೀತಿ ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ಹಾವೇರಿ, ಗದಗ, ಬೀದರ್, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button