ಮಕ್ಕಳಿಗೆ ಓದು ಓದು ಎಂದು ಪೋಷಕರು ಒತ್ತಡ ಹಾಗೂ ಶಿಕ್ಷೆ ಹೇರಬಾರದು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು.

ಪಾಂಡವಪುರ ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಕರು ಮಕ್ಕಳಿಗೆ ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಓದುವಂತೆ ಹೆಚ್ಚು ಒತ್ತಡ ಹೇರದೆ ಅವರಿಷ್ಟಕ್ಕೆ ಬಿಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ನಗರ ಪ್ರದೇಶಗಳಲ್ಲಿ ಕಾನ್ವೆಂಟ್ ಗಳಲ್ಲಿ ಓದುತ್ತಿರುವ ಮಕ್ಕಳು ಮುಂದೆ ಕ್ಲರ್ಕ್ ಆಗಲು ಮಾತ್ರ ಸಾಧ್ಯ. ಆದರೆ ನಮ್ಮ ಹಳ್ಳಿಗಾಡಿನಲ್ಲಿ ವಿದ್ಯಾಭ್ಯಾಸ ಮಾಡುವ ಗ್ರಾಮೀಣ ಮಕ್ಕಳು ಐಎಎಸ್, ಐಪಿಎಸ್ ಹಾಗೂ ಐಎಫ್ ಎಸ್ ನಂತಹ ಉನ್ನತ ಹುದ್ದೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಓದು ಸೇರಿದಂತೆ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ಮೈ ಫಾಮಿಲಿ ನಾಟಕ ಪ್ರದರ್ಶನವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಆ ನಾಟಕ ತೋರಿಸಬೇಕು ಎಂದರು.
ಬೇಸಿಗೆ ಶಿಬಿರಗಳ ಮೂಲಕ ಮಕ್ಕಳಲ್ಲಿ ಹಿಂಜರಿಕೆ ಎಂಬುದು ದೂರವಾಗಲಿದೆ. ನಮ್ಮ ಕಾಲದಲ್ಲಿ ಬೇಸಿಗೆ ಶಿಬಿರ, ಮೊಬೈಲ್, ಟಿವಿ ಇರಲಿಲ್ಲ. ಅಜ್ಜಿ ಮನೆಗೆ ತೆರಳಿ, ವಿವಿಧ ಮಾದರಿಯ ಆಟವಾಡುವ ಜತೆಗೆ ಬಗೆ ಬಗೆಯ ಹಣ್ಣು ಹಂಪಲುಗಳನ್ನು ಕಿತ್ತು ತಿನ್ನುತ್ತಿದ್ದೇವು. ಆದರೆ ಈಗ ಮಕ್ಕಳಿಗೆ ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ. ಅಷ್ಟರಮಟ್ಟಿಗೆ ಮೊಬೈಲ್ ಮಕ್ಕಳನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜಿಎಸ್ ವಿದ್ಯಾಸಂಸ್ಥೆ ರಾಮಕೃಷ್ಣೇಗೌಡರ ನೇತೃತ್ವದಲ್ಲಿ ಗ್ರಾಮೀಣ ಮಕ್ಕಳಿಗೆ ಕಡಿಮೆ ದರದಲ್ಲಿ ವಿದ್ಯಾಭ್ಯಾಸ ಒದಗಿಸುತ್ತಿದೆ. ಆದರೆ ನಮ್ಮ ಸುತ್ತಮುತ್ತಲಿನ ವಿದ್ಯಾ ಸಂಸ್ಥೆಗಳು ಲಕ್ಷಗಟ್ಟಲೆ ವಂತಿಕೆ ಪಡೆಯುವ ಮೂಲಕ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸವನ್ನು ದುಬಾರಿಗೊಳಿಸಿವೆ ಎಂದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಪತ್ರಕರ್ತ ಬಿ.ಎಸ್.ಜಯರಾಂ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ರೈತಸಂಘದ ಮುಖಂಡ ಕಟ್ಟೇರಿ ಶಂಕರ್, ಸಂಪನ್ಮೂಲ ವ್ಯಕ್ತಿಗಳಾದ ದರಸಗುಪ್ಪೆ ಮುರಳಿ, ಶಶಿಕಾಂತ್, ಬಿಜಿಎಸ್ ಶಾಲೆಯ ಪ್ರಾಂಶುಪಾಲ ರಘುಕುಮಾರ್, ಎಲ್ಲಾ ಶಿಕ್ಷಕರು, ಪೋಷಕರು, ಮಕ್ಕಳು ಇತರರಿದ್ದರು.
ಇದೇ ವೇಳೆ ಶಿಬಿರದ ಮಕ್ಕಳು ಕಿರು ನಾಟಕ, ಕೋಲಾಟ, ಭರತನಾಟ್ಯ, ಯೋಗಾಶನ, ನೃತ್ಯ ಸೇರಿದಂತೆ ಇತರೆ ಪ್ರಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.


