T20I world cup: ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ದುಬೈ: ಡೇವಿಡ್ ವಾರ್ನರ್(David Warner) ಮತ್ತು ಮಿಚೆಲ್ ಮಾರ್ಷ್(Mitchell Marsh) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ(Australia) ತಂಡ ನ್ಯೂಜಿಲ್ಯಾಂಡ್(New Zealand) ವಿರುದ್ಧ 8 ವಿಕೆಟ್ಗಳ ಸುಲಭ ಜಯ ಸಾಧಿಸಿ ಚೊಚ್ಚಲ ಟಿ20 ವಿಶ್ವಕಪ್(T20I world cup) ಎತ್ತಿ ಹಿಡಿದಿದೆ.
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ( Dubai International Cricket Stadium) ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್ ನೀಡಿದ್ದ 173 ರನ್ಗಳ ಗುರಿಯನ್ನು ಕಾಂಗರೂ ಪಡೆ 18.5 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್ಗಳ ಸುಲಭ ಜಯ ಸಾಧಿಸಿತು. 2010ರಲ್ಲಿ ಫೈನಲ್ ತಲುಪಿದ್ದ ಆಸ್ಟ್ರೇಲಿಯಾ(Australia) ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡು ನಿರಾಸೆಯನುಭವಿಸಿತ್ತು. ಆದರೆ ಈ ಬಾರಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ಟಿ20 ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.
ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಡೇವಿಡ್ ವಾರ್ನರ್ ಫೈನಲ್ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು. 3ನೇ ಓವರ್ನಲ್ಲೇ ತಮ್ಮ ಜೊತೆಗಾರ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡರೂ ಧೃತಿಗೆಡದ ವಾರ್ನರ್ ಮಿಚೆಲ್ ಮಾರ್ಷ್ ಜೊತೆಗೆ 2ನೇ ವಿಕೆಟ್ಗೆ 92 ರನ್ಗಳನ್ನು ಸೇರಿಸಿ ತಂಡವನ್ನು ಸುಸ್ಥಿತಿಗೆ ತಂದು ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ಎಡಗೈ ಬ್ಯಾಟರ್ 38 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 53 ರನ್ಗಳಿಸಿದರು.
ವಾರ್ನರ್ ಪತನದ ಬೆನ್ನಲ್ಲೇ ಮಿಚ್ ಮಾರ್ಷ್ ಜೊತೆ ಸೇರಿಕೊಂಡ ಮ್ಯಾಕ್ಸ್ವೆಲ್ 3ನೇ ವಿಕೆಟ್ ಮುರಿಯದ 73 ರನ್ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಮಾರ್ಷ್ 50 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ ಅಜೇಯ 77 ಮತ್ತು ಗ್ಲೇನ್ ಮ್ಯಾಕ್ಸ್ವೆಲ್ 18 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 28 ರನ್ಗಳಿಸಿ ಆಸ್ಟ್ರೇಲಿಯಾಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟರು.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಕಿವೀಸ್ ಪಡೆ ಪೈನಲ್ ಪಂದ್ಯದಲ್ಲಿ ಆಸೀಸ್ ಅಬ್ಬರಕ್ಕೆ ಶರಣಾದರು. ಟ್ರೆಂಟ್ ಬೌಲ್ಟ್ ಮಾತ್ರ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದರು.
ಕೇನ್ ವಿಲಿಯಮ್ಸನ್ ಆಟ ವ್ಯರ್ಥ
ಇದಕ್ಕು ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ಗಳಿಸಿತ್ತು. ನಾಯಕ ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 85 ರನ್ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ನಾಯಕನೊಬ್ಬನ ಗರಿಷ್ಠ ಸ್ಕೋರ್ ಆಗಿತ್ತು.
ಇವರನ್ನು ಬಿಟ್ಟರೆ ಯಾವುದೇ ಬ್ಯಾಟರ್ ಕಿವೀಸ್ಗೆ ನೆರವಾಗಲಿಲ್ಲ. ಅದರಲ್ಲೂ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ 35 ಎಸೆತಗಳನ್ನೆದುರಿಸಿ ಕೇವಲ 28 ರನ್ಗಳಿಸಿದ್ದು ಕಿವೀಸ್ ಪಡೆಗೆ ನುಂಗಲಾರದ ತುತ್ತಾಯಿತು. ಉಳಿದಂತೆ ಫಿಲಿಫ್ಸ್ 18, ನೀಶಮ್ 13 ರನ್ಗಳಿಸಿ ಮತ್ತು ಸೆಮಿಫೈನಲ್ ಹೀರೋ ಡೇರಿಲ್ ಮಿಚೆಲ್ 11 ರನ್ಗಳಿಸಿದ್ದರು.
ಆಸ್ಟ್ರೇಲಿಯಾ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ಜೋಶ್ ಹೆಜಲ್ವುಡ್(Josh Hazlewood) 4 ಓವರ್ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದು ಕಿವೀಸ್ ಆಘಾತ ನೀಡಿದರು. ಆ್ಯಡಂ ಜಂಪಾ 26ಕ್ಕೆ1 ವಿಕೆಟ್ ಪಡೆದರು. ಆದರೆ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಮಾತ್ರ 4 ಓವರ್ಗಳಲ್ಲಿ 60 ರನ್ ನೀಡಿ ದುಬಾರಿಯಾದರು.