ಕ್ರೀಡೆ

IND vs NZ- ರಾಂಚಿಯಲ್ಲೂ ಭಾರತ ಜಯಭೇರಿ

ನ್ಯೂಜಿಲೆಂಡ್ ವಿರುದ್ಧದ 3 ಟಿ20 ಪಂದ್ಯಗಳ ಸರಣಿಯನ್ನ ಭಾರತ ಜಯಿಸಿದೆ. ಇಂದು ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳಿಂದ ಜಯಭೇರಿ ಭಾರಿಸಿದತು. ಇನ್ನೊಂದು ಪಂದ್ಯ ಬಾಕಿ ಇರುವಂತೆ ಭಾರತ ಸರಣಿಯನ್ನ ವಶಪಡಿಸಿಕೊಂಡಿದೆ. ಇವತ್ತಿನ ಪಂದ್ಯದಲ್ಲಿ ಗೆಲ್ಲಲು ನ್ಯೂಜಿಲೆಂಡ್ ಒಡ್ಡಿದ 154 ರನ್ ಸವಾಲನ್ನು ಭಾರತ ಸರಾಗವಾಗಿ ಚೇಸ್ ಮಾಡಿ ಗೆದ್ದಿತು. ಕೆಎಲ್ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಮಾಡಿ ಗೆಲುವಿನ ರೂವಾರಿ ಎನಿಸಿದರು.

ಭಾರತದ ಚೇಸಿಂಗ್​ನ ಆರಂಭ ನಿಧಾನವಾಗಿತ್ತಾದರೂ ಏಳೆಂಟು ಓವರ್​ಗಳ ಬಳಿಕ ವೇಗ ಪಡೆದುಕೊಂಡಿತು. ಪವರ್ ಪ್ಲೇನಲ್ಲಿ ಭಾರತ ಹೆಚ್ಚು ರನ್ ಗಳಿಸಲಿಲ್ಲ. ಆದರೆ, ಪವರ್ ಪ್ಲೇ ನಂತರ ರನ್ ಗಳಿಕೆಗೆ ಕುದುರಿಕೊಂಡ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಪರಸ್ಪರ ಮೀರಿಸುವಂತೆ ಶಾಟ್​ಗಳನ್ನ ಹೊಡೆದರು.

ಕೆಎಲ್ ರಾಹುಲ್ 49 ಬಾಲ್​ನಲ್ಲಿ 65 ರನ್ ಗಳಿಸಿದರು. ಇದು ಅವರ 16ನೇ ಅರ್ಧಶತಕವಾಗಿದೆ. ಕಳೆದ 5 ಟಿ20 ಪಂದ್ಯಗಳಿಂದ 4 ಬಾರಿ ಅರ್ಧಶತಕ ಭಾರಿಸಿದ್ದಾರೆ. ರೋಹಿತ್ ಶರ್ಮಾ ಕೇವಲ 36 ಬಾಲ್​ನಲ್ಲಿ 55 ರನ್ ಭಾರಿಸಿದರು. ಅವರ ಇನ್ನಿಂಗ್ಸಲ್ಲಿ 5 ಸಿಕ್ಸರ್ ಒಳಗೊಂಡವು.

ಸೂರ್ಯಕುಮಾರ್ ಯಾದವ್ ಅನಗತ್ಯವಾಗಿ ಆಕ್ರಮಣಕಾರಿ ಶಾಟ್ ಹೊಡೆಯಲು ಹೋಗಿ ಔಟಾದರು. ಭಾರತ ತಂಡದಲ್ಲಿ ಬಿದ್ದ ಎಲ್ಲಾ 3 ವಿಕೆಟ್​ಗಳೂ ಟಿಮ್ ಸೌದಿ ಪಾಲಾದವು.

ನ್ಯೂಜಿಲೆಂಡ್ ವೇಗದ ಆರಂಭ; ನಿಧಾನಗತಿಯಲ್ಲಿ ಅಂತ್ಯ: 

ಇದಕ್ಕೆ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಭರ್ಜರಿ ಆರಂಭ ಪಡೆಯಿತು. 9 ಓವರ್​ಗಳಷ್ಟರಲ್ಲಿ 80 ರನ್ ಗಡಿ ಮುಟ್ಟಿತು. ಆದರೆ, ಸ್ಕೋರು 79 ರನ್ ಇದ್ದಾಗ ಮಾರ್ಕ್ ಚಾಪ್ಮನ್ ಎರಡನೆಯವರಾಗಿ ಔಟಾದ ಬಳಿಕ ನ್ಯೂಜಿಲೆಂಡ್ ವೇಗ ತಗ್ಗಿತು. ವಿಕೆಟ್​ಗಳು ಬೀಳತೊಡಗಿದವು. ಪ್ರಮುಖ ಜೊತೆಯಾಟ ಬರಲಿಲ್ಲ.

ಹರ್ಷಲ್ ಪಟೇಲ್ ಪದಾರ್ಪಣೆ:

ಆರ್​ಸಿಬಿ ಬೌಲರ್ ಹರ್ಷಲ್ ಪಟೇಲ್ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲೇ 2 ವಿಕೆಟ್ ಪಡೆದು ಗಮನ ಸೆಳೆದರು. ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದ ಹರ್ಷಲ್ ಪಟೇಲ್ ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರಿಸಿದರು. 4 ಓವರ್ ಬೌಲ್ ಮಾಡಿ 25 ರನ್ನಿತ್ತು 2 ವಿಕೆಟ್ ಪಡೆದರು.

ಭಾರತದ ಇನ್ನಿಬ್ಬರು ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಾಹರ್ ದುಬಾರಿ ಎನಿಸಿದರೆ, ಸ್ಪಿನ್ ಜೋಡಿಗಳಾದ ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಇಬ್ಬರಿಂದ 8 ಓವರ್ ಬೌಲ್ ಮಾಡಿ 45 ರನ್ ಇತ್ತು 2 ವಿಕೆಟ್ ಪಡೆದರು.

ರಿಷಭ್ ವಿನ್ನಿಂಗ್ ರನ್:

ಭಾರತ ಮೊನ್ನೆ ಜೈಪುರದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್​ಗಳಿಂದ ರೋಚಕ ಗೆಲುವು ಪಡೆದಿತ್ತು. ಆ ಪಂದ್ಯದಲ್ಲೂ ರಿಷಭ್ ಪಂತ್ ಸಿಕ್ಸರ್ ಮೂಲಕ ವಿನ್ನಿಂಗ್ ರನ್ ಗಳಿಸಿದ್ದರು. ಇವತ್ತಿನ ಪಂದ್ಯದಲ್ಲೂ ಅವರು ಸಿಕ್ಸರ್ ಮೂಲಕವೇ ಗೆಲುವಿನ ರನ್ ಪಡೆದರು. ಭಾರತಕ್ಕೆ ಇವತ್ತಿನದು ಸತತ ಎರಡನೇ ಗೆಲುವು. 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಯಿಂದ ಮುಂದಿದೆ. ನ. 21ರಂದು ಕೊನೆಯ ಪಂದ್ಯ ಆಗಿದೆ. ಆ ಪಂದ್ಯ ಸೋತರೂ ಸರಣಿ ಭಾರತದ ವಶವೇ ಆಗಿರಲಿದೆ.

Related Articles

Leave a Reply

Your email address will not be published. Required fields are marked *

Back to top button