Chikungunya-Dengue: ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘೀ, ಚಿಕುನ್ ಗುನ್ಯ ಪ್ರಕರಣ; ಮುನ್ನೆಚ್ಚರಿಕೆ ಇರಲಿ!
ಬೆಂಗಳೂರಿನಲ್ಲಿ ಈ ಪ್ರಕರಣಗಳ ನಿರಂತರ ಏರಿಕೆಗೆ ಕಾರಣ ಮಳೆ ಎನ್ನಲಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ಮನೆ ಸುತ್ತಮುತ್ತಗಳಲ್ಲಿ ನೀರು ನಿಲ್ಲುತ್ತಿದೆ. ನಿಂತ ನೀರಿನಿಂದಾಗಿ ಸೊಳ್ಳೆ ಹೆಚ್ಚುತ್ತಿದ್ದು, ಪ್ರಕರಣ ಸಂಖ್ಯೆ ಏರಿಕೆಗೆ ಕಾರಣವಾಗಿದೆ.
ಬೆಂಗಳೂರು (ನ. 18): ಕೊರೋನಾ ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ರಾಜ್ಯದಲ್ಲಿ ಸದ್ಯ ಈಗ ಡೆಂಘೀ (Dengue) ಮತ್ತು ಚಿಕೂನ್ ಗುನ್ಯ (Chikungunya) ಅಬ್ಬರ ಹೆಚ್ಚಾಗಿದೆ. ರಾಜ್ಯದಲ್ಲಿ ಮಳೆಗಾಲದ ಬಳಿಕ ಈ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ನಿರಂತರ ಮಳೆ ಪರಿಣಾಮ (Rain)ಈ ಪ್ರಕರಣ ಹೆಚ್ಚಾಗಿದೆ. ರಾಜ್ಯದಲ್ಲಿ ಮಳೆಗಾಲ ಆರಂಭವಾದಗಿನಿಂದ ಸುಮಾರು 6 ಸಾವಿರ ಡೆಂಘೀ ಮತ್ತು ಚಿಕೂನ್ ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮಳೆಯಿಂದ ತತ್ತರಿಸಿರುವ ಬೆಂಗಳೂರಿನಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದು, ಆಸ್ಪತ್ರೆಗಳಲ್ಲಿ ದಿನೇ ದಿನೇ ಈ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ. ರಾಜ್ಯದಲ್ಲಿ ಈವರೆಗೆ 1,635 ಚಿಕುನ್ ಗುನ್ಯ ಮತ್ತು 4,387 ಡೆಂಘೀ ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕೂಡ ಎಚ್ಚರಿಕೆ ನೀಡಿದ್ದು, ಸುರಕ್ಷತಾ ಕ್ರಮ ವಹಿಸುವಂತೆ ಜನರಿಗೆ ತಿಳಿಸಿದೆ.
ಡೆಂಘೀ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸಿದ್ದು, ಈಗಾಗಲೇ ಜ್ವರದಿಂದ ಬಳಲುತ್ತಿರುವವರ ರಕ್ತದ ಮಾಧರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಡೆಂಘೀ ಪ್ರಕರಣ ಪತ್ತೆಯಾದ ಕಡೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಈ ಪ್ರಕರಣಗಳ ನಿರಂತರ ಏರಿಕೆಗೆ ಕಾರಣ ಮಳೆ ಎನ್ನಲಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ಮನೆ ಸುತ್ತಮುತ್ತಗಳಲ್ಲಿ ನೀರು ನಿಲ್ಲುತ್ತಿದೆ. ನಿಂತ ನೀರಿನಿಂದಾಗಿ ಸೊಳ್ಳೆ ಹೆಚ್ಚುತ್ತಿದ್ದು, ಪ್ರಕರಣ ಸಂಖ್ಯೆ ಏರಿಕೆಗೆ ಕಾರಣವಾಗಿದೆ.
ಕಳೆದೊಂದು ತಿಂಗಳಲ್ಲಿ ರಾಜ್ಯದಲ್ಲಿ ಶೇ 20 ರಷ್ಟು ಪ್ರಕರಣಗಳು ಹೆಚ್ಚಾಗಿದ್ದು ಮಕ್ಕಳಲ್ಲಿ ಈ ಡೆಂಘೀ ಪ್ರಕರಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಜನರಿಗೆ ಕೂಡ ಅರಿವು ಮೂಡಿಸಲಾಗುತ್ತಿದ್ದು, ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ. ಈ ನಡುವೆ ಸಾರ್ವಜನಿಕರು ಕೂಡ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ
ಮುನ್ನೆಚ್ಚರಿಕಾ ಕ್ರಮ
ಮಳೆಗಾಲ ಬರುತ್ತಿದ್ದಂತೆ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತವೆ. ಮಳೆ ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಸಂತಾನಾಭಿವೃದ್ಧಿ ಹೆಚ್ಚುವ ಜೊತೆಗೆ ಮಾರಕ ಜ್ವರಗಳನ್ನು ಕೂಡ ಹರಡುತ್ತವೆ. ಸೊಳ್ಳೆಗಳಿಂದ ಬರುವ ರೋಗಗಳಿಗೆ ಯಾವುದೇ ಗುಣಪಡಿಸುವ ಚಿಕಿತ್ಸೆಯಾಗಲಿ ಮತ್ತು ಲಸಿಕೆಯಾಗಲಿ ಇರುವುದಿಲ್ಲ. ಈ ಕಾರಣದಿಂದ ನಮ್ಮನ್ನು ರಕ್ಷಿಸಲು ಏಕೈಕ ಮಾರ್ಗ ಎಂದರೆ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು.
ಇದರಿಂದ ಮನೆಯ ಸುತ್ತಲೂ ಇರುವ ಟೈರ್, ಬಕೆಟ್‍ಗಳು, ಆಟಿಕೆಗಳು, ಅಲ್ಲಲ್ಲಿ ನಿಂತಿರುವ ನೀರು, ಹೂವಿನ ಕುಂಡಗಳು ಅಥವಾ ಕಸದ ಡಬ್ಬಿಗಳಲ್ಲಿ ನಿಂತಿರುವ ನೀರಿನಲ್ಲಿ ಸಾಮಾನ್ಯವಾಗಿ ಸೊಳ್ಳೆಗಳು ಸಂತಾನಾಭಿವೃದ್ಧಿ ಮಾಡಿಕೊಳ್ಳುತ್ತವೆ. ಈ ಹಿನ್ನಲೆ ಈ ರೀತಿ ನೀರು ನಿಲ್ಲದಂತೆ ಮನೆಯ ಸುತ್ತ ಶುಚಿತ್ವ ಕಾಪಾಡಿಕೊಳ್ಳಿ. ನಿಗದಿತ ಅವಧಿಗೊಮ್ಮೆ ಸೊಳ್ಳೆಗಳನ್ನು ನಿಯಂತ್ರಿಸುವ ಕೀಟನಾಶಕ ಸಿಂಪಡಣೆ ಮಾಡುವುದು ಮುಖ್ಯ.
ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರ ಈ ಅನಾರೋಗ್ಯದ ಮುಖ್ಯ ರೋಗಲಕ್ಷಣಗಳು ಎಂದರೆ ಹಠಾತ್ ಜ್ವರ, ಕೀಲು ನೋವು, ಸ್ನಾಯು ನೋವು, ತಲೆನೋವು, ವಾಕರಿಕೆ, ಆಯಾಸ, ದದ್ದು ಈ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.