BBMPಮುಂದಿನ 4 ತಿಂಗಳಲ್ಲಿ ಪಾಲಿಕೆ ಚುನಾವಣೆ ಬಹುತೇಕ ಖಚಿತ…..?
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಈ ನಿಟ್ಟಿನಲ್ಲಿ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಮುಂದಿನ 4 ತಿಂಗಳಲ್ಲಿ ಪಾಲಿಕೆ ಚುನಾವಣೆ ಬಹುತೇಕ ಖಚಿತವಾಗಿದ್ದು, ಬಹುಮತ ಸಾಧಿಸಲು ಪಕ್ಷ ಮತ್ತು ಸರ್ಕಾರ ಸಂಕಲ್ಪ ಮಾಡಿದೆ. ಈಗಾಗಲೇ ಚುನಾವಣೆಗಾಗಿ ಸಕಲ ತಯಾರಿ ನಡೆಸಿಕೊಂಡಿರುವ ಬಿಜೆಪಿ, ಚುನಾವಣೆಗೂ ಮುನ್ನ ಶಾಸಕರು, ಸಂಸದರು, ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿದೆ.
ಬಿಜೆಪಿ ಮಾಸ್ಟರ್ ಪ್ಲಾನ್
ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ವಿಭಾಗದ ಸದಸ್ಯರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಲು ಸಕಲ ರೀತಿಯಲ್ಲೂ ರೂಪುರೇಷೆ ತಯಾರು ಮಾಡುತ್ತಿದೆ. ಸುಪ್ರೀಂಕೋರ್ಟ್ ಆದೇಶ ಬಂದ ಕೂಡಲೇ ಚುನಾವಣೆ ನಡೆಸಲು ನಿರ್ಧರಿಸಿದ್ದು, ಚುನಾವಣೆಗೂ ಮುನ್ನ ಅಭ್ಯರ್ಥಿ ಆಯ್ಕೆಗೆ ಮಾನದಂಡ ರೂಪಿಸಲು ಪ್ಲಾನ್ ಮಾಡಿದೆ.
ಉತ್ತಮ ಟ್ರ್ಯಾಕ್ ರೆಕಾರ್ಡ್ ಮತ್ತು ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡಲು ಕೇಸರಿ ಪಡೆ ನಿರ್ಧರಿಸಿದೆ. ಪಾರದರ್ಶಕವಾಗಿ ರಾಜ್ಯ ಬಿಜೆಪಿ ಯಿಂದಲೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪ್ರತಿಯೊಂದು ವಾರ್ಡುಗಳಿಗೆ ಭೇಟಿ ನೀಡಿ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲು ನಿರ್ಧಾರ ಮಾಡಲಾಗಿದೆ. ಪ್ರತಿ ವಾರ್ಡಿನಲ್ಲಿ ಒಬ್ಬರಾಗಬಹುದು ಅಥವಾ ಐದು ಜನರಾಗಬಹುದು ಅಭ್ಯರ್ಥಿಗಳ ಪಟ್ಟಿ ಮಾಡಿ ಮಂಡಲದಲ್ಲಿ ನೀಡಬೇಕು ಎಂದು ಸೂಚಿಸಲಾಗಿದೆ. ಮಂಡಲದಲ್ಲಿ ಸ್ಕ್ರೀನಿಂಗ್ ಮಾಡಿ ನಿರ್ಧಾರ ಮಾಡುವುದು, ಬಳಿಕ ಆ ಪಟ್ಟಿಯನ್ನು ರಾಜ್ಯದ ಹೈಕಮಾಂಡ್‌ಗೆ ನೀಡುವುದು ಹೀಗೆ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಶಾಸಕರಿಗೂ ಅವಕಾಶ ನೀಡಲಾಗಿದೆ.
ವಲಸೆ ಶಾಸಕರು ಕೂಡ ಪ್ರತಿ ವಾರ್ಡಿಗೆ ಕನಿಷ್ಠ ಮೂರು ಜನರ ಹೆಸರು ಸೂಚಿಸಬೇಕು. ಅಭ್ಯರ್ಥಿ ಹೆಸರನ್ನು ಫೈನಲ್ ಮಾಡುವ ಅವಕಾಶ ವಲಸೆ ಶಾಸಕರಿಗ ಇರುವುದಿಲ್ಲ. ಎಲ್ಲಾ ಅಭ್ಯರ್ಥಿಗಳು ಫೈನಲ್ ಆದ ಬಳಿಕ ಪಕ್ಷವೇ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಅಂತಾ ತಿಳಿದುಬಂದಿದೆ. ಈ ಬಾರಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿರುವ ಬಿಜೆಪಿ ಚುರುಕಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದೆ.