AIDS ಸೋಂಕಿತನಾಗಿದ್ದರೂ.. ಮಾದಕ ವಸ್ತು ಬೆರೆಸಿ, ಅಸುರಕ್ಷಿತ ಲೈಂಗಿಕ ಸಂಪರ್ಕ!
ಬೆಂಗಳೂರು: ಗಂಡ ಹೆಂಡತಿ ಸಂಬಂಧ ಅಂದರೆ ಪವಿತ್ರವಾದುದು. ಗಂಡ ಹೆಂಡತಿ ಮಧ್ಯೆ ಬರೀ ಸೆಕ್ಸ್ ಒಂದೇ ಇರುವುದಿಲ್ಲ. ಅದರ ಹೊರತಾಗಿಯೂ ಪ್ರೀತಿ, ಪ್ರೇಮ, ಕಾಳಜಿ , ಸ್ನೇಹ , ಕಾತರ, ತಾಳ್ಮೆ, ತ್ಯಾಗ, ಗೌರವ, ಸುರಕ್ಷತೆ ಭಾವನೆ ಎಲ್ಲವೂ ಇರುತ್ತದೆ. ಆದರೆ ಇಲ್ಲೊಬ್ಬ ಪತಿರಾಯ ಇದ್ಯಾವುದೂ ಇಲ್ಲದಂತೆ, ತನ್ನ ಹೆಂಡತಿ ಮೇಲೆ ದ್ವೇಷ ಕಾರಿದ್ದಾನೆ. ಸೇಡು ತೀರಿಸಿಕೊಳ್ಳಲು ವ್ಯಕ್ತಿ ಯಾವ ಮಟ್ಟಕ್ಕೂ ಕೂಡ ಇಳಿಯಬಹುದು ಎಂಬುದಕ್ಕೆ ಈ ಪಾಪಿ ಉದಾಹರಣೆ ಆಗಿದ್ದಾನೆ. ಇಲ್ಲಿ ಈ ಪಾಪಿಗೆ ಏಡ್ಸ್ ಅಥವಾ ಎಚ್ಐವಿ ಸೋಂಕು ಇತ್ತು. ಆದರೂ ಆತನ ಹೆಂಡತಿ ಆತನ ಜೊತೆ ಸಂಸಾರ ಮಾಡುತ್ತಾ, ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಆದರೆ ಆ ಸ್ಯಾಡಿಸ್ಟ್ ಗಂಡನಿಗೆ ಇದು ಹಿಡಿಸಲಿಲ್ಲ. “ನಾನು ಮಾತ್ರ ಏಡ್ಸ್ ರೋಗಿ, ನನ್ನ ಹೆಂಡತಿ ಯಾಕೆ ಆರೋಗ್ಯದಿಂದ ಇರಬೇಕು” ಅಂತ ಯೋಚಿಸಿದವನೇ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಇದೀಗ ಆತನ ಹೆಂಡತಿ ಕಣ್ಣೀರಿಡುವಂತಾಗಿದೆ.
ಈ ಘಟನೆ ನಡೆದಿದ್ದಾದರೂ ಎಲ್ಲಿ ಗೊತ್ತಾ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ. ಆರೋಪಿ ಹಾಗೂ ಆತನ ಹೆಂಡತಿಗೆ 6 ವರ್ಷದ ಹಿಂದೆ ವಿವಾಹವಾಗಿತ್ತು. 2015 ರಲ್ಲಿ 28 ವರ್ಷದ ಯುವತಿಯನ್ನು ವಿವಾಹವಾಗಿದ್ದ. ಆತ ಕ್ಯಾಬ್ ಚಾಲಕನಾಗಿದ್ದು, ಆತ ಎಚ್ಐವಿ ಸೋಂಕಿತನಾಗಿದ್ದ.
ಆದರೆ ಅದೃಷ್ಟವಶಾತ್ ಆಕೆಗೆ ಯಾವುದೇ ಸೋಂಕು ತಗುಲಿರಲಿಲ್ಲ. ಪತಿ ಎಚ್ಐವಿ ಸೋಂಕಿತನಾಗಿದ್ದರೂ, ಸಂತ್ರಸ್ತೆ ಆತನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದು, ಅಚ್ಚುಕಟ್ಟಾಗಿ ಸಂಸಾರವನ್ನು ಸಾಗಿಸುತ್ತಿದ್ದಳು.
ಮತ್ತೋರ್ವ ಮಹಿಳೆಯೊಂದಿಗೂ ಸಂಬಂಧ ಹೊಂದಿದ್ದ ಪತಿ
ಇಷ್ಟೆಲ್ಲಾ ಗಂಭೀರ ಸಮಸ್ಯೆಗಳಿದ್ದರೂ ಪಾಪಿ ಪತಿ ಮತ್ತೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈಕೆ ಮನೆಯಲ್ಲಿ ಇಲ್ಲದ ವೇಳೆ ಪತಿ, ಮತ್ತೋರ್ವ ಮಹಿಳೆಯನ್ನು ಮನೆಗೆ ಕರೆತರುತ್ತಿದ್ದ. ಈ ವಿಚಾರ ಗೊತ್ತಾಗಿ ಮನೆಯಲ್ಲಿ ಜಗಳ, ಗಲಾಟೆಗಳು ಆಗಿದ್ದವು. ಆದರೂ ಆತ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ.
ಗಂಡನನ್ನು ತೊರೆದು ತವರಿಗೆ ಹೋಗಿದ್ದ ಪತ್ನಿ
ಒಂದೆಡೆ ಗಂಡನಿಗಿದ್ದ ಸೋಂಕು, ಮತ್ತೊಂದೆಡೆ ಆತನ ವರ್ತನೆ, ನಡವಳಿಕೆ. ಇವುಗಳಿಂದ ಬೇಸತ್ತ ಪತ್ನಿ ಕೆಲ ದಿನಗಳ ಹಿಂದೆ ಆತನನ್ನು ಬಿಟ್ಟು, ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಆರೋಪಿ ಪತಿ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.
ಮಾದಕ ವಸ್ತು ಬೆರೆಸಿ, ಅಸುರಕ್ಷಿತ ಲೈಂಗಿಕ ಸಂಪರ್ಕ
ಕಳೆದ ವಾರ ಆರೋಪಿ ಪತಿ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ನಿನ್ನನ್ನು ಮೀಟ್ ಆಗಬೇಕು ಅಂತ ಹೆಂಡತಿಯನ್ನು ತನ್ನ ಸ್ನೇಹಿತನ ಮನೆಗೆ ಕರೆಸಿದ್ದಾನೆ. ಅಲ್ಲಿ ಆಕೆಗೆ ಮತ್ತು ಬರುವ ಔಷಧಿ ಕೊಟ್ಟು, ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಅಸುರಕ್ಷಿತ ರೀತಿಯಲ್ಲಿ ಆಕೆ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎನ್ನಲಾಗಿದೆ.
ಎಚ್ಐವಿ ಪರೀಕ್ಷಾ ವರದಿಗಾಗಿ ಕಾಯುತ್ತಿರುವ ಪತ್ನಿ
ಘಟನೆ ಬಗ್ಗೆ ತಿಳಿದ ಪತ್ನಿ ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ. ತಡ ಮಾಡದೇ ಆಸ್ಪತ್ರೆಗೆ ತೆರಳಿ ಎಚ್ಐವಿ ಪರೀಕ್ಷೆ ಮಾಡಿಸಿದ್ದಾಳೆ. ಅದರ ರಿಸಲ್ಟ್ಗಾಗಿ ಇನ್ನೂ ಕಾಯುತ್ತಿದ್ದಾಳೆ. ಈಗ ತನಗೂ ಎಚ್ಐವಿ ಸೋಂಕು ಬಂದರೆ ಏನು ಮಾಡುವುದು ಅಂತ ಕಣ್ಣೀರು ಹಾಕುತ್ತಿದ್ದಾಳೆ.
ಪಾಪಿ ಪತಿ ವಿರುದ್ದ ಪತ್ನಿಯಿಂದ ಪೊಲೀಸರಿಗೆ ದೂರು
ಇದೀಗ ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆರೋಪಿ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಇದಾಗುತ್ತಿದ್ದಂತೆ ಪಾಪಿ ಪತಿ ಮನೆಯಿಂದಲೇ ಎಸ್ಕೇಪ್ ಆಗಿದ್ದಾನೆ. ಇದೀಗ ಮಹಿಳಾ ಸಹಾಯವಾಣಿ ನೆರವಿನಿಂದ ಆಕೆ ಕೌನ್ಸೆಲಿಂಗ್ಗೆ ಒಳಗಾಗಿದ್ದಾಳೆ ಎನ್ನಲಾಗಿದೆ.