ತಮಿಳುನಾಡಿನ ಎಐಎಡಿಎಂಕೆ (AIADMK) ಪಕ್ಷವನ್ನು ಸ್ಥಾಪಿಸಿ ಇಂದಿಗೆ 50 ವರ್ಷವಾಗಿದೆ. ಆದರೆ, ಇಂತಹ ಸ್ಥಿತಿಯಲ್ಲಿ ಪಕ್ಷ ಹೀನಾಯ ಸೋಲನುಭವಿಸಿದ್ದು, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ (MK Stalin) ನೇತೃತ್ವದಲ್ಲಿ ಡಿಎಂಕೆ (DMK) ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಆದರೆ, ಎಡಿಎಂಕೆ ಪಕ್ಷದಲ್ಲಿ ಇದೀಗ ಯಾರಿಗೆ ಪಕ್ಷದ ಚುಕ್ಕಾಣಿ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಡಪ್ಪಾಡಿ ಕೆ. ಪಳನಿಸ್ವಾಮಿ (Edappadi K.Palaniswami) ವಿ.ಕೆ. ಶಶಿಕಲಾ (VK Sasikala) ಭ್ರಷ್ಟಾಚಾರ ಆರೋಪದಲ್ಲಿ ಜೈಲು ಪಾಲಾಗಿದ್ದ ಸಂದರ್ಭದಲ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದ್ದರು. ಇದೀಗ ಶಶಿಕಲಾ ಜೈಲಿನಿಂದ ಮರಳಿದ್ದು, ಮತ್ತೆ ಪಕ್ಷದ ಸಂಪೂರ್ಣ ಅಧಿಕಾರ ಹಿಡಿಯುವ ಪಣತೊಟ್ಟಿದ್ದಾರೆ. ಆದರೆ, ಎಡಪ್ಪಾಡಿ ಪಳನಿಸ್ವಾಮಿ ಇದಕ್ಕೆ ಅವಕಾಶ ನೀಡುತ್ತಿಲ್ಲ. ಈ ನಡುವೆ ಪಕ್ಷದ 50ನೇ ವರ್ಷದ ವಾರ್ಷಿಕ ದಿನಾಚರಣೆಯ ದಿನ ಅವರು ನೀಡಿದ್ದ ಹೇಳಿಕೆ ಇದೀಗ ಇಬ್ಬರ ನಡುವಿನ ಜಟಾಪಟಿಯನ್ನು ಮತ್ತಷ್ಟು ಹೆಚ್ಚಿಸಿದೆ
ಶಶಿಕಲಾ vs ಪಳನಿಸ್ವಾಮಿ ಫೈಟ್:
ಪಕ್ಷದ 50ನೆ ವಾರ್ಷಿಕ ದಿನಾಚರಣೆಯಂದು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ” ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಳ್ಳುವ ಶಶಿಕಲಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಶಶಿಕಲಾ ಎಐಎಡಿಎಂಕೆ ಸದಸ್ಯೆಯಲ್ಲ ಮತ್ತು ಅವರ ಹೇಳಿಕೆಗಳಿಗೆ ಯಾವುದೇ ಪ್ರಸ್ತುತತೆ ಇಲ್ಲ. ಎಐಎಡಿಎಂಕೆಯ ಪ್ರಸ್ತುತ ನಾಯಕತ್ವವನ್ನು ನ್ಯಾಯಾಲಯವು ಗುರುತಿಸಿದೆ. ಹೀಗಾಗಿ ಶಶಿಕಲಾ ಅವರಿಗೆ ಮತ್ತೆ ಪಕ್ಷದಲ್ಲಿ ಸ್ಥಾನವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಚುಕ್ಕಾಣಿ ಮೇಲೆ ಶಶಿಕಲಾ ಕಣ್ಣು:
ಆದರೆ, ಮತ್ತೊಂದೆಡೆ ಪಕ್ಷದ ಕಾರ್ಯಕರ್ತರಿಗೆ ಪತ್ರ ಬರೆಯುವ ಮತ್ತು ದೂರವಾಣಿ ಕರೆ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಶಶಿಕಲಾ, “ಎಡಿಎಂಕೆ ಪಕ್ಷ ಇದೀಗ ಛಿದ್ರವಾಗಿದೆ. ಪಕ್ಷವನ್ನು ಇಂತಹ ಸ್ಥಿತಿಯಲ್ಲಿಟ್ಟುಕೊಂಡು ಪ್ರಬಲ ವಿರೋಧಿಗಳನ್ನು ಎದುರಿಸುವುದು ಸಾಧ್ಯವಿಲ್ಲ. ಡಿಎಂಕೆ ಪಕ್ಷವನ್ನು ಸೋಲಿಸಬೇಕು, ನಾವು ಮತ್ತೆ ಅಧಿಕಾರಕ್ಕೆ ಏರಬೇಕು ಎಂದರೆ ಎಲ್ಲರನ್ನೂ ಮತ್ತೆ ಪಕ್ಷದ ಒಳಗೆ ಸಂಘಟಿಸಬೇಕಿದೆ. ಹೋರಾಟವನ್ನು ರೂಪಿಸಬೇಕಿದೆ” ಎಂದು ಕರೆ ನೀಡಿದ್ದಾರೆ. ಅಲ್ಲದೆ, ತಾನು ಎಡಿಎಂಕೆ ಪಕ್ಷಕ್ಕೆ ಶೀಘ್ರದಲ್ಲಿ ಮತ್ತೆ ಅಧ್ಯಕ್ಷೆಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.