ದೇಶ
Trending

ಜಮ್ಮು ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ, ಭೂಕುಸಿತ

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಾಶ್ಮೀರದ ಅವಳಿ ಜಿಲ್ಲೆಗಳಲ್ಲಿ ಶನಿವಾರ ಮುಂಜಾನೆ ಭೂಕುಸಿತ ಮತ್ತು ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಸಂಭವಿಸಿದ್ದು, ಪ್ರಕೃತಿಯ ವಿಕೋಪದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.

ರಾಂಬನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಕೆಲವರು ಕಾಣೆಯಾಗಿದ್ದಾರೆ. ರಾಂಬನ್​​ನ ರಾಜ್ ಗಡ್ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ಮೇಘಸ್ಫೋಟ ಹಿನ್ನೆಲೆಯಲ್ಲಿ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಧಿಕಾರಿಗಳು ಕಾಣೆಯಾದವರನ್ನು ಹುಡುಕುತ್ತಿದ್ದಾರೆ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದವರಿಗೆ ತಕ್ಷಣದ ಪರಿಹಾರವನ್ನು ಒದಗಿಸಲಾಗುತ್ತಿದೆ.

ರಿಯಾಸಿಯಲ್ಲಿ ಭೀಕರ ಭೂಕುಸಿತ: ಇನ್ನೊಂದೆಡೆ, ಹತ್ತಿರದ ರಿಯಾಸಿ ಜಿಲ್ಲೆಯ ಮಹೋರ್ ಪ್ರದೇಶದಲ್ಲಿ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಏಳು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಹೋರ್‌ನ ಬದ್ದರ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಈ ಭೂಕುಸಿತ ಸಂಭವಿಸಿದೆ. ಕಾಣೆಯಾದ ಕುಟುಂಬವನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮನೆಯ ಮಾಲೀಕ ನಜೀರ್ ಅಹ್ಮದ್, ಅವರ ಪತ್ನಿ ಮತ್ತು ಐದು ಅಪ್ರಾಪ್ತ ಪುತ್ರರು ಕಾಣೆಯಾಗಿದ್ದು, ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಹಲವಾರು ಉತ್ತರ ಭಾರತದ ರಾಜ್ಯಗಳು ಧಾರಾಕಾರ ಮಳೆಯಿಂದಾಗಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ, ಅಪಾರ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ತುತ್ತಾಗಿವೆ.

ಇತ್ತೀಚೆಗೆ ಹಲವು ದುರಂತಗಳು : ಆಗಸ್ಟ್ 26ರಂದು ರಿಯಾಸಿ ಜಿಲ್ಲೆಯ ಕತ್ರಾ ಪ್ರದೇಶದ ವೈಷ್ಣೋದೇವಿ ದೇವಾಲಯದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 35 ಭಕ್ತರು ಪ್ರಾಣ ಕಳೆದುಕೊಂಡಿದ್ದಲ್ಲದೆ, ಹಲವರು ಗಾಯಗೊಂಡಿದ್ದರು. ಅಲ್ಲದೆ, ಅದೇ ದಿನ, ದೋಡಾದಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಆಗಸ್ಟ್ 14ರಂದು, ಮಚೈಲ್ ಮಾತಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಚಿಸೋಟಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ 60ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಹಲವರು ಕಾಣೆಯಾಗಿದ್ದರಲ್ಲದೆ, ನೂರಾರು ಜನರು ಗಾಯಗೊಂಡಿದ್ದರು.

ತನಿಖೆಗೆ ಸಮಿತಿ ರಚನೆ : ಹವಾಮಾನ ಎಚ್ಚರಿಕೆಗಳ ಹೊರತಾಗಿಯೂ ತೀರ್ಥಯಾತ್ರೆಗೆ ಅನುಮತಿ ನೀಡಿರುವ ಬಗ್ಗೆ ಜಮ್ಮುಕಾಶ್ಮೀರ ಎಲ್-ಜಿ ಮನೋಜ್ ಸಿನ್ಹಾ ಅವರ ಮೇಲೆ ಆರೋಪಗಳು ಕೇಳಿಬಂದಿವೆ. ವೈಷ್ಣೋದೇವಿ ದೇಗುಲದಲ್ಲಿ ಸಂಭವಿಸಿದ ಭೂಕುಸಿತದ ಕಾರಣಗಳ ಬಗ್ಗೆ ತನಿಖೆ ನಡೆಸಲು ಸಿನ್ಹಾ ಮೂವರು ಸದಸ್ಯರ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ. ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ (SMVDSB) ಅಧ್ಯಕ್ಷರೂ ಆಗಿರುವ ಸಿನ್ಹಾ ಅವರಿಗೆ ಸಮಿತಿಯು ಎರಡು ವಾರಗಳಲ್ಲಿ ವರದಿ ಸಲ್ಲಿಸಲು ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button