
ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಲೈಂಗಿಕ ದೌರ್ಜನ್ಯ, ಗಂಡನಿಂದ ಕಿರುಕುಳ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ದಾಖಲಾಗಿರುವ 1,888 ಪ್ರಕರಣಗಳಲ್ಲಿ 2,143 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಶಿಕ್ಷೆಯ ಪ್ರಮಾಣ ಮಾತ್ರ ಶೂನ್ಯವಾಗಿರುವುದು ಗಮನಾರ್ಹ.2025ರ ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 549 ಪ್ರಕರಣಗಳಲ್ಲಿ 407 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 739 ಪ್ರಕರಣಗಳಿಂದ 969 ಹಾಗೂ 2023ರಲ್ಲಿ 600 ಪ್ರಕರಣಗಳಿಂದ 767 ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಒಟ್ಟು ದಾಖಲಾಗಿರುವ 1,888 ಪ್ರಕರಣಗಳಲ್ಲಿ 2,143 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. 83 ಪ್ರಕರಣಗಳು ಖುಲಾಸೆಗೊಂಡಿವೆ ಎಂದು ಗೃಹ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.ರಾಜ್ಯದಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ವರ್ಷ 2 ಪ್ರಕರಣಗಳಿಗೆ ಸೀಮಿತವಾಗಿತ್ತು. ಲೈಂಗಿಕ ಕಿರುಕುಳ ಹಾಗೂ ಗಂಡನಿಂದ ಕಿರುಕುಳ ಪ್ರಕರಣ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಎರಡೂವರೆ ವರ್ಷಗಳಲ್ಲಿ 16,273 ಪ್ರಕರಣಗಳಿಂದ 19,312 ಆರೋಪಿಗಳನ್ನು ಬಂಧಿಸಲಾಗಿದೆ. ದಿನಕ್ಕೆ ಸರಾಸರಿ 16 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ. ಈ ಪೈಕಿ 189 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪೊಲೀಸರು ಸಶಕ್ತರಾಗಿದ್ದಾರೆ.ಅಲ್ಲದೆ, ಪತಿಯಿಂದ ಪತ್ನಿಗೆ ಕಿರುಕುಳ ಪ್ರಕರಣಗಳು ಕಡಿಮೆಯಾಗಿಲ್ಲ. ಎರಡೂವರೆ ವರ್ಷಗಳಲ್ಲಿ 7,516 ಕೇಸ್ಗಳು ದಾಖಲಾಗಿದ್ದು, 7,930 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿನಿತ್ಯ 8 ಕೇಸ್ಗಳು ಗಂಡನಿಂದ ಕಿರುಕಳ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು ಪ್ರಕರಣಗಳಲ್ಲಿ 16 ಮಂದಿ ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇನ್ನುಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಚಯಸ್ಥರಿಂದಲೇ ಅತ್ಯಾಚಾರ: ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಒಟ್ಟಿಗೆ ಸುತ್ತಾಡುವ ಯುವ ಜೋಡಿಗಳು ದೈಹಿಕ ಸಂಪರ್ಕದ ಬಳಿಕ ವಿವಾಹವಾಗದೆ, ನುಣುಚಿಕೊಳ್ಳುವ ಪ್ರಹಸನಗಳು ಹೆಚ್ಚಾಗುತ್ತಿವೆ. ಬಳಿಕ ಠಾಣೆಗೆ ಹೋಗಿ ಸಂತ್ರಸ್ತೆಯು ಪ್ರಿಯಕರನ ವಿರುದ್ಧ ಅತ್ಯಾಚಾರ ಮಾಡಿರುವುದಾಗಿ ದೂರು ನೀಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವೆನಿಸಿದೆ. ಬಹುತೇಕ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ಪ್ರೇರೆಪಿತಗೊಂಡು ಆನ್ಲೈನ್ ಮೂಲಕ ಸಂಪರ್ಕ ಸಾಧಿಸಿ, ಆರಂಭವಾಗುವ ಸ್ನೇಹ ಕ್ರಮೇಣ ಆತ್ಮೀಯತೆಗೆ ತಿರುಗಿ ಬೇಜವಾಬ್ದಾರಿ ಕೃತ್ಯಗಳಲ್ಲಿ ಯುವ ಸಮುದಾಯ ಭಾಗಿಯಾಗುತ್ತಿರುವುದು ನೋವಿನ ವಿಚಾರವಾಗಿದೆ. ವಿವಿಧ ಕಾರಣಗಳಿಗಾಗಿ ದೂರವಾಗಿ, ತನಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯುವತಿ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ, ಹಣ ವಸೂಲಿ ಮಾಡುವ ಆರೋಪಿಗಳ ಸಂಖ್ಯೆ ಕೂಡ ಕಡಿಮೆಯಾಗಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಸೇಫ್ ಸಿಟಿ ಯೋಜನೆ: ದಾಖಲಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ರಾಜಧಾನಿಯು ಸಿಂಹಪಾಲು ಪಡೆದುಕೊಂಡಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕಾಗಿ ಸೇಫ್ ಸಿಟಿ ಯೋಜನೆಯಡಿ ಕೇಂದ್ರದ ಸಹಭಾಗಿತ್ವದೊಂದಿಗೆ ರಾಜ್ಯ ಸರ್ಕಾರದಿಂದ ನಗರದ 3 ಸಾವಿರ ಸ್ಥಳಗಳಲ್ಲಿ 496.57 ಕೋಟಿ ವೆಚ್ಚದಲ್ಲಿ 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ 635 ಕೋಟಿ ರೂ. ವೆಚ್ಚದಲ್ಲಿ ಇನ್ನೂ 1,376 ಕ್ಯಾಮರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.ಈ ಕ್ಯಾಮರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿ ನೇರವಾಗಿ ಕಮಾಂಡ್ ಸೆಂಟರ್ಗೆ ಸಂಪರ್ಕ ಕಲ್ಪಿಸಲಾಗಿದೆ. ಹೊಯ್ಸಳ ಗಸ್ತು ವಾಹನಗಳಲ್ಲಿ ಡ್ಯಾಶ್ ಕ್ಯಾಮರಾ ಅಳವಡಿಸಿ, ಸಾರ್ವಜನಿಕರ ತುರ್ತು ಕರೆಗಳಿಗೆ ಸ್ಪಂದಿಸುತ್ತಿದೆ. ನಗರದೆಲ್ಲೆಡೆ, 50 ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದೆ. ಶೋಷಣೆಗೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ, ಕಾನೂನು ನೆರವು ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಕಾರಣವೇನು ?
- ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲದಿರುವುದು.
- ಡ್ರಗ್ಸ್, ಕುಡಿತ ಹಾಗೂ ಇನ್ನಿತರ ದುಶ್ಚಟದ ಗುಂಗಿನಲ್ಲಿ ಅರಿವಿಲ್ಲದೆ ಬಲತ್ಕಾರ.
- ಅಧಿಕಾರ ಹಾಗೂ ಹಣದ ಪ್ರಭಾವ.
- ನೀಲಿಚಿತ್ರ ವೀಕ್ಷಣೆಗೆ ದಾಸರಾಗಿ ದುಷ್ಟ ಚಟುವಟಿಕೆಗಳಲ್ಲಿ ಭಾಗಿ.
- ಬಡತನ ಸೇರಿದಂತೆ ಇನ್ನಿತರ ವೀಕ್ನೆಸ್ ಬಳಸಿಕೊಂಡು ಲೈಂಗಿಕವಾಗಿ ದುರ್ಬಳಕೆ.


