ರಾಜ್ಯ
Trending

ಯಾವುದೇ ಜಾತಿ ಬಿಟ್ಟುಹೋಗಿದ್ದರೆ ಮಾಹಿತಿ ನೀಡಲು ಸೆ.1ರವರೆಗೆ ಅವಕಾಶ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು, ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆಪ್ಟೆಂಬರ್ 1ರ ವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಸೆಪ್ಟೆಂಬರ್ 1ರ ವರೆಗೆ ಅವಕಾಶ: ಆಗಸ್ಟ್​​ 22, 2025ರಂದು ಯಾವುದೇ ಜಾತಿ, ಉಪ ಜಾತಿಗಳು ಬಿಟ್ಟು ಹೋಗಿದ್ದರೆ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳು ಇದ್ದಲ್ಲಿ, 7 ದಿನಗಳ ಒಳಗೆ ನೀಡಲು ಕೋರಲಾಗಿತ್ತು. ಆದರೆ, ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಅವಧಿಯನ್ನು ವಿಸ್ತರಿಸಲು ಕೋರಿರುವ ಕಾರಣ, ಈ ಬಗ್ಗೆ ಸಲಹೆ/ಸೂಚನೆ, ಮನವಿಗಳನ್ನು ನೀಡುವ ಅವಧಿಯನ್ನು 1.09.2025ರ ಸಂಜೆ 5 ಗಂಟೆಯ ವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂಗ್ರಹಿಸಲಾದ ಜಾತಿ/ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬ‌ರ್​ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು.

ಸಂಪರ್ಕ ಸಂಖ್ಯೆ: ಸಾರ್ವಜನಿಕರು ತಮ್ಮ ಸಲಹೆ, ಸೂಚನೆ, ಮನವಿಗಳನ್ನು ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂಬರ್ 16, ಡಿ. ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತ ನಗರ, ಬೆಂಗಳೂರು ಅಥವಾ kscbcb@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ‌ ವಿವರಗಳಿಗೆ ದೂರವಾಣಿ ಸಂಖ್ಯೆ 080-29506668 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್​ 22ರಿಂದ ಅಕ್ಟೋಬರ್ 7ರ ವರೆಗೆ ಸಮೀಕ್ಷೆ: ಕಳೆದ ಜುಲೈ ತಿಂಗಳಿನಲ್ಲೇ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಸೆಪ್ಟೆಂಬರ್​ 22ರಿಂದ ಅಕ್ಟೋಬರ್ 7ರ ವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದರು. ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಸುವ ನಿರ್ಧಾರ ಮಾಡಲಾಗಿದೆ. ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕು. ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು ಎಂದು ಸಿಎಂ ಸೂಚಿಸಿದ್ದರು. ಹಾಗೆಯೇ, ಈ ಬಾರಿ ಮೊಬೈಲ್ ಆ್ಯಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು. ರಾಜ್ಯದ ಎಲ್ಲಾ 7 ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದಿದ್ದರು.

Related Articles

Leave a Reply

Your email address will not be published. Required fields are marked *

Back to top button