
ನೆಲಮಂಗಲ: ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (airport) ಸ್ಥಾಪನೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ ಬಾರಿ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ ಮೂರು ಸ್ಥಳವನ್ನು ಕೇಂದ್ರ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹೀಗಿರುವಾಗಲೇ ಎರಡನೇ ವಿಮಾನ ನಿಲ್ದಾಣಕ್ಕೆ ಬಾರಿ ವಿರೋಧ ವ್ಯಕ್ತವಾಗಿದೆ. ಇದೀಗ ತಮ್ಮ ಮನೆ, ಜಮೀನು ಉಳಿಸಿಕೊಳ್ಳಲು ಸದ್ದಿಲ್ಲದೆ ಹತ್ತಾರು ಹಳ್ಳಿಯ ರೈತರು (Farmers) ಹಾಗೂ ರೈತ ಮುಖಂಡರು ಸಭೆ ಮಾಡಿದ್ದಾರೆ.ನೆಲಮಂಗಲ ಕುಣಿಗಲ್ ರಸ್ತೆಯ ಅಕ್ಕಪಕ್ಕದ ಎರಡು ಕಡೆ ವಿಮಾನ ನಿಲ್ದಾಣದ ಸ್ಥಳ ಗುರುತು ಮಾಡಲಾಗಿದೆ. ಹೀಗಾಗಿ ನೆಲಮಂಗಲ ವಿಧಾನಸಭೆ ಕ್ಷೇತ್ರದ ಪೆಮ್ಮನಹಳ್ಳಿ ಗ್ರಾಮದಲ್ಲಿ ನೂರಾರು ರೈತರ ಸಭೆ ಮಾಡಲಾಗಿದ್ದು, ವಿಮಾನ ನಿಲ್ದಾಣ ವಿರುದ್ಧ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿದ್ದಾರೆ.
ವಿಮಾನ ನಿಲ್ದಾಣವಾದರೆ ನೂರಾರು ವರ್ಷಗಳ ಮನೆ ಮಠ, ಆಸ್ತಿ ಪಾಸ್ತಿ, ದೇವಾಲಯಗಳು, ಜಾನುವಾರುಗಳು ತೋಟಗಳು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ಕರಪತ್ರಗಳ ಮೂಲಕ ರೈತ ಮುಖಂಡರು ರೈತರ ಮನವರಿಕೆಗೆ ಮುಂದಾಗಿದ್ದಾರೆ.ಇತ್ತೀಚೆಗೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದರು. ಕನಕಪುರ ರಸ್ತೆಯ 2 ಸ್ಥಳಗಳಿಗೆ ಅಧಿಕಾರಿಗಳು ಭೇಟಿಕೊಟ್ಟಿದ್ದರು. ಸಚಿವ ಎಂ ಬಿ ಪಾಟೀಲ್ ಜೊತೆಗೆ ಸುದೀರ್ಘ ಚರ್ಚೆ ಕೂಡ ಮಾಡಿದ್ದರು. ಬಳಿಕ ನೆಲಮಂಗಲ ಮತ್ತು ಕುಣಿಗಲ್ ಭಾಗದ ಸ್ಥಳಗಳನ್ನೂ ಏರ್ಪೋರ್ಟ್ ಅಥಾರಿಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು.ಸರ್ಕಾರ ಗುರುತಿಸಿರುವ 3 ಸ್ಥಳಗಳನ್ನ ಬಿಟ್ಟು ಶಿರಾದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಕೂಗು ಕೇಳಿಬಂದಿತ್ತು. ಸಿಎಂ ಸಿದ್ದರಾಮಯ್ಯಗೆ ಟಿಬಿ ಜಯಚಂದ್ರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು ಪಕ್ಷಾತೀತವಾಗಿ ಪತ್ರ ಬರೆದಿದ್ದಾರೆ.
ಕನಕಪುರದಲ್ಲೂ ವಿಮಾನ ನಿಲ್ದಾಣಕ್ಕೆ ಜಾಗ ಪರಿಶೀಲಿಸಲಾಗಿದೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡವೇ ಕಾರಣ ಅಂತಾ ಕೆಲವರಿಂದ ಬೇಸರ ವ್ಯಕ್ತವಾಗಿತ್ತು. ಏರ್ಪೋರ್ಟ್ ಸ್ಥಾಪನೆ ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಅಂತಾ 30ಕ್ಕೂ ಹೆಚ್ಚು ಶಾಸಕರು ಧ್ವನಿ ಎತ್ತಿದ್ದರು. ಸದ್ಯ ಪರ ವಿರೋಧ ಏನೇ ಇದ್ದರೂ, ಅಂತಿಮವಾಗಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಮತ್ತು ಕೇಂದ್ರ ಸರ್ಕಾರವೇ ಜಾಗ ಫೈನಲ್ ಮಾಡಲಿದೆ. ಸದ್ಯ ಯಾವ ಸ್ಥಳ ಗುರ್ತಿಸ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.