
ಬೆಂಗಳೂರು: ವೈದ್ಯಕೀಯ ಪದವಿ ಸೇರಿದಂತೆ ಇತರೆ ಕೋರ್ಸ್ಗಳ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಅಂಕಗಳ ಹಂಚಿಕೆಯಲ್ಲಿನ ಗೊಂದಲಗಳಿಗೆ ಸಂಬಂಧಿಸಿದಂತೆ ಸಾವಿರಾರು ಅರ್ಜಿಗಳು ನ್ಯಾಯಾಲಯದ ಮೆಟ್ಟಿಲೇರುವಂತಾಗುತ್ತಿದೆ ಎಂದು ತಿಳಿಸಿರುವ ಹೈಕೋರ್ಟ್, ಪರೀಕ್ಷೆಗಳಲ್ಲಿ ಮಾದರಿ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು (ಕೀ ಅನ್ಸರ್ಸ್) ನೀಡುವ ಕುರಿತಂತೆ ಮರು ಪರಿಶೀಲನೆ ನಡೆಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (ಆರ್ಜಿಯುಹೆಚ್ಎಸ್) ಅಕಾಡೆಮಿಕ್ ಕೌನ್ಸಿಲ್ಗೆ ನಿರ್ದೇಶನ ನೀಡಿದೆ.ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ನಿಯಂತ್ರಿಸುವ ನಿಯಮದ ಕಾನೂನು ಬದ್ಧತೆ ಪ್ರಶ್ನಿಸಿ ಹೋಮಿಯೋಪತಿಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ ಎಂ. ಅಭಿಷೇಕ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿದ್ದು, ಈ ನಿರ್ದೇಶನ ನೀಡಿದೆ.ಪ್ರಶ್ನೆ ಪತ್ರಿಕೆಗಳನ್ನು ಹೊಂದಿಸುವ ಅದೇ ವ್ಯಕ್ತಿಯಿಂದ ಮಾದರಿ ಉತ್ತರಗಳನ್ನು (ಮಾದರಿ ಉತ್ತರಗಳನ್ನು) ಸಿದ್ದಪಡಿಸಿದಲ್ಲಿ ಸಹಕಾರಿಯಾಗಲಿದೆ. ಹೀಗಾಗಿ, ಪ್ರಶ್ನೆ ಪತ್ರಿಕೆಯನ್ನು ತಯಾರಿಸುವಾಗ ಮಾದರಿ ಅಥವಾ ಕೀ ಉತ್ತರಗಳನ್ನು ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ ವ್ಯಕ್ತಿಯೇ ಉತ್ತರ ಪತ್ರಿಕೆಗಳನ್ನೂ ಸಿದ್ದಪಡಿಸಬಹುದು. ಈ ಪ್ರಕ್ರಿಯೆ ವಿವಿಯ ಮೇಲೆ ಯಾವುದೇ ಆಡಳಿತಾತ್ಮಕ ಒತ್ತಡಕ್ಕೆ ಕಾರಣವಾಗುವುದಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಎದುರಾಗುವಂತಹ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ ಎಂದು ಪೀಠ ಹೇಳಿದೆ.ಅಲ್ಲದೆ, ಕೀ ಉತ್ತರಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ಸಮಸ್ಯೆಗಳಿವೆ ಎಂಬುದಾಗಿ ಕಾರಣ ನೀಡಿ ನುಣುಚಿಕೊಳ್ಳುವುದಕ್ಕೆ ಬದಲಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸರಿಯಾದ ದೃಷ್ಟಿಕೋನದಿಂದ ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಪೀಠ ತಿಳಿಸಿದೆ.
ಈ ರೀತಿಯ ಮೌಲ್ಯಮಾಪನದಿಂದ ನ್ಯಾಯಾಲಯಕ್ಕೆ ಬರುವ ಅರ್ಜಿಗಳ ಸಂಖ್ಯೆಗಳು ಹೆಚ್ಚಾಗುವುದು ಮಾತ್ರವಲ್ಲದೆ, ಮೌಲ್ಯಮಾಪನದ ದೋಷದಿಂದ ಅನುತ್ತೀರ್ಣರಾದರೆ ಅವರ ಆತ್ಮವಿಶ್ವಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. ಜೊತೆಗೆ, ವಿದ್ಯಾರ್ಥಿಯ ಭವಿಷ್ಯ, ಅವರ ಕುಟುಂಬ ಮತ್ತು ಇಡೀ ಸಮಾಜ ಹಾಗೂ ವಿವಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಮಾದರಿ ಉತ್ತರಗಳು ಲಭ್ಯವಿಲ್ಲದ ಪರಿಣಾಮ ಮೌಲ್ಯಮಾಪನದಲ್ಲಿ ವ್ಯತ್ಯಾಸಗಳಿಂದಾಗಿ ನ್ಯಾಯಾಲಯಕ್ಕೆ ಬರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂಬಂಧ ವಿವಿಯ ಅಕಾಡೆಮಿಕ್ ಕೌನ್ಸಿಲಿಂಗ್ಗೆ ಅರಿವಿದೆ. ಅಲ್ಲದೆ, ತೊಂದರೆ ಅನುಭವಿಸಿದ ಎಲ್ಲ ವಿದ್ಯಾರ್ಥಿಗಳು ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಬರಲು ಮುಂದಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನ್ಯಾಯಾಲಯಕ್ಕೆ ಬಂದು ಪರಿಹಾರ ಕೇಳುವುದನ್ನು ತಪ್ಪಿಸುವುದು ಹೇಗೆ ಎಂಬುದರ ಬಗ್ಗೆ ಕೌನ್ಸಿಲ್ ಪರಿಶೀಲನೆ ನಡೆಸಬೇಕು.ಜೊತೆಗೆ, ಮಾದರಿ ಉತ್ತರಗಳನ್ನು ಒದಗಿಸಲು ಎದುರಾಗುವ ತೊಂದರೆಗಳನ್ನು ಹೇಗೆ ನಿವಾರಿಸಬಹುದು ಎಂಬ ಬಗ್ಗೆ ಚಿಂತನೆ ನಡೆಸಬೇಕು. ವಿವಿಯು ಹೊರಭಾಗದ ಏಜೆನ್ಸಿಗಳ ಮೂಲಕ ಉತ್ತರಗಳನ್ನು ಒದಗಿಸುವ ಪ್ರಯತ್ನ ಮಾಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.