ರಾಜ್ಯ

ಗೃಹಲಕ್ಷ್ಮೀ ಕಂತು ಎಷ್ಟು ತಿಂಗಳಿಂದ ಬಾಕಿ?

ಹಾಸನ: ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಒಡತಿಗೆ ಪ್ರತಿ ತಿಂಗಳು ನೀಡುತ್ತಿರುವ ತಲಾ ಎರಡು ಸಾವಿರ ರೂ. ಕಳೆದ ಮೂರು ತಿಂಗಳಿಂದ ಕೈಸೇರದೆ ಇಂದು, ನಾಳೆ ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.2024 ರ ಡಿಸೆಂಬರ್‌ ತಿಂಗಳವರೆಗೂ ಗೃಹಲಕ್ಷ್ಮಿ ಯೋಜನೆ ಹಣ ತಲುಪಿದ್ದು, ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನ ಹಣ ಬಾಕಿ ಇದೆ ಎಂಬುದು ಅಧಿಕಾರಿಗಳ ವಾದವಾದರೆ, ಬಹಳಷ್ಟು ಗೃಹಿಣಿಯರು ನಾಲ್ಕೈದು ತಿಂಗಳಿಂದ ಹಣವೇ ಬಂದಿಲ್ಲ ಎಂದು ದೂರುತ್ತಾರೆ. ಜಿಲ್ಲೆಯಲ್ಲಿ 4,69,652 ಜನ ಗೃಹಲಕ್ಷ್ಮಿಯರು ಇದ್ದಾರೆ. ಈ ಪೈಕಿ 4.40 ಲಕ್ಷ ಮಹಿಳೆಯರು ಯೋಜನೆಗೆ ಅರ್ಹರು ಎಂದು ಗುರುತಿಸಲಾಗಿದೆ. ಉಳಿದವರು ಆಧಾರ್‌ ತಿದ್ದುಪಡಿ, ತೆರಿಗೆ ಪಾವತಿ ಮತ್ತಿತರ ಕಾರಣದಿಂದ ಯೋಜನೆಯಿಂದ ಹೊರಗುಳಿದಿದ್ದಾರೆ. ಇನ್ನು ಕೆಲವರು ವಲಸೆ ಹೋಗಿದ್ದಾರೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಧರಣಿ.ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಶೇ.93ರಷ್ಟು ಸಾಧನೆಯಾಗಿದೆ ಎನ್ನುತ್ತಿದೆ ಇಲಾಖೆಯ ಅಂಕಿ-ಅಂಶಗಳು. ತೆರಿಗೆ ಪಾವತಿ ಮಾಡುವವರು ಭಯದ ಕಾರಣ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

ಬ್ಯಾಂಕಿಗೆ ಅಲೆದಾಟ:

ಗ್ರಾಮೀಣ ಭಾಗದಲ್ಲಿ ಕೆಲ ಬಡ ಮಹಿಳೆಯರು ‘ಗೃಹಲಕ್ಷ್ಮೀ’ ಹಣವನ್ನು ಅವಲಂಬಿಸಿದ್ದಾರೆ. ದಿನಸಿ ಪದಾರ್ಥ ಖರೀದಿಗೆ, ಸಂಘ- ಸಂಸ್ಥೆ ಸಾಲ ತೀರಿಸಲು, ಮಾತ್ರೆ, ಔಷಧ ಖರೀದಿ ಹೀಗೆ ನಾನಾ ಕೆಲಸಕ್ಕೆ ಹಣವನ್ನು ನೆಚ್ಚಿಕೊಂಡಿದ್ದಾರೆ. ಆದರೆ ಕಳೆದ 3 ತಿಂಗಳಿಂದ ಹಣ ಬಿಡುಗಡೆಯಾಗದ ಕಾರಣ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಬರುವ ಕಾರಣ ಹಣ ಬಂದಿದೆಯೇ ಎಂದು ತಿಳಿಯಲು ಬ್ಯಾಂಕ್‌ಗೆ ನಿತ್ಯವೂ ಅಲೆಯುತ್ತಿದ್ದಾರೆ. ಹಣ ಬಂದರೆ ನಿಮ್ಮ ಮೊಬೈಲ್‌ಗೆ ಮಾಹಿತಿ ರವಾನಿಸುತ್ತೇವೆ ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿ ಹೇಳಿದರೂ, ಮಹಿಳೆಯರ ಪರದಾಟ ನಿಂತಿಲ್ಲ ಎನ್ನುತ್ತಾರೆ ಬ್ಯಾಂಕ್‌ ಸಿಬ್ಬಂದಿ.

ಗ್ಯಾರಂಟಿ ಹಣಿಯಲು ಬಿಜೆಪಿ ತಂತ್ರ

ಗ್ಯಾರಂಟಿ ಯೋಜನೆಗಳು ಪ್ರತಿಪಕ್ಷದವರ ನಿದ್ದೆಗೆಡಿಸಿದ್ದು, ಅದಕ್ಕಾಗಿ ಸರಕಾರದ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್‌ ಮೈಸೂರಲ್ಲಿ ಹೇಳಿದ್ದಾರೆ.‘ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ 5ನೇ ಸ್ಥಾನ, ಚಾಮರಾಜನಗರ ಒಂದನೇ ಸ್ಥಾನದಲ್ಲಿದೆ. ಪ್ರತಿ ತಿಂಗಳು ತಾಲೂಕು ಸಮಿತಿ ಸಭೆ ನಡೆಸಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ,’’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.‘ಚಾಮರಾಜನಗರ ವೀಕ್ಷಣೆ ವೇಳೆ ಸೋಲಿಗರ ಕಾಲೊನಿಗೆ ಗ್ಯಾರಂಟಿ ಅನುಷ್ಠಾನ ಆಗಿರಲಿಲ್ಲ. ಬಳಿಕ ಎಲ್ಲರಿಗೂ ಅದನ್ನು ತಲುಪುವಂತೆ ಮಾಡಲಾಯಿತು. ಹೀಗೆ ತಾಲೂಕು ಸಮಿತಿ ಮುಂದಿನ ದಿನಗಳಲ್ಲಿ ಗ್ಯಾರಂಟಿ ನಡೆ ಪ್ರತಿ ಮನೆ ಕಡೆ ಎಂದು ಪಂಚಾಯಿತಿ ಹಂತಕ್ಕೂ ತಲುಪುವ ದೊಡ್ಡ ಮಟ್ಟದ ಯೋಜನೆ ರೂಪಿಸಲಾಗುತ್ತಿದೆ,’’ ಎಂದರು.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ಸಮಿತಿ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ, ಕಾರ್ಯಕರ್ತರ ಮೂಲಕವೇ ಪರಿಶೀಲಿಸುತ್ತಿದೆ. ಸಮಿತಿಯಿಂದ ಶಾಸಕ, ಸಂಸದರ ಯಾವುದೇ ಹಕ್ಕು ಚ್ಯುತಿ ಆಗುವುದಿಲ್ಲ. 54 ಸಾವಿರ ಕೋಟಿ ರೂ. ಬೃಹತ್‌ ಹಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವ ಉದ್ದೇಶದಿಂದ ಸರಕಾರ ಸಮಿತಿ ರಚಿಸಿದೆ. ಸಮಿತಿಗೆ ನೀಡುತ್ತಿರುವ ಗೌರವಧನ ಏನೇನೂ ಅಲ್ಲ. ಅದಾಗಿಯೂ ಸಮಿತಿ ಅಧ್ಯಕ್ಷ, ಸದಸ್ಯರು ಜನರಿಗಾಗಿ ನಿರಂತರ ದುಡಿಮೆಯಲ್ಲಿದ್ದಾರೆ,ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button