ರಾಜ್ಯಸುದ್ದಿ

ಮೈಸೂರು ಮಹಾರಾಜರಿಂದ ರಕ್ಷಿಸಲ್ಪಟ್ಟಿದ್ದ ಹೆಣ್ಣು ಚಿರತೆ ದಿಢೀರ್ ಸಾವು

ಬಂಡೀಪುರ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಮರಿ ಚಿರತೆಯೊಂದು ಮೈಸೂರು ಮಹಾರಾಜರ ಕುಟುಂಬದ ಕಣ್ಣಿಗೆ ಬಿದ್ದಿತ್ತು. ಅಂದು, ರಕ್ಷಣೆ ಮಾಡಿದ್ದ ಮೈಸೂರು ಸಂಸ್ಥಾನದ ಕುಟುಂಬಸ್ಥರು ಶ್ಯಾಡೋ ಎಂದು ನಾಮಕರಣ ಮಾಡಿ ಮೈಸೂರು ಮೃಗಾಲಯಕ್ಕೆ ಹಸ್ತಾಂತರ ಮಾಡಿದ್ದರು. ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕಳುಹಿಸಿದ್ದರು. ಆದರೆ, ಇದೀಗ ಶ್ಯಾಡೋ ಚಿರತೆ ಮೃತಪಟ್ಟಿದೆ.

2011 ರಲ್ಲಿ ಮೈಸೂರು ಮಹಾರಾಜರ ಕುಟುಂಬದಿಂದ ಬಂಡೀಪುರ ಅರಣ್ಯದಲ್ಲಿ (Bandipur Forest) ಸಂರಕ್ಷಿಸಲ್ಪಟ್ಟು, ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದ ಶ್ಯಾಡೋ ಚಿರತೆ (Shadow leopard) ಪಬ್ಲಿಕ್ ಪ್ರೆಂಡ್ಲಿಯಾಗಿ ಪ್ರವಾಸಿಗರ ಆಕರ್ಷಣೆಯಾಗಿತ್ತು. ಹೀಗಾಗಿಯೇ ಮುಂಜಾಗ್ರತಾ ಕ್ರಮವಾಗಿ ಬಂಡಿಪುರದಿಂದ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಕೇಂದ್ರದಲ್ಲಿ ಹೆಣ್ಣು ಚಿರತೆ ಶ್ಯಾಡೋ ಅನ್ನು ಇರಿಸಲಾಗಿತ್ತು. ಆರೋಗ್ಯವಾಗಿದ್ದ ಚಿರತೆ ಶ್ಯಾಡೋ ದಿಢೀರ್ ಮೃತಪಟ್ಟಿದೆ. ಚಿರತೆ ಸಾವಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅನನುಭವಿ ವೈದ್ಯರು ಮತ್ತು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯಗಳು ಕಾರಣ ಎಂದು ಪ್ರಾಣಿ ಪ್ರಿಯರ ಆರೋಪವಾಗಿದೆ.2 ಸಾವಿರಕ್ಕೂ ಅಧಿಕ ಅಪರೂಪದ ವ್ಯನ್ಯ ಜೀವಿಗಳ ತಾಣವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ವರ್ಷಕ್ಕೆ 50 ಕೋಟಿ ರೂಪಾಯಿಗೂ ಅಧಿಕ ಹಣಸಂಗ್ರಹವಾಗುತ್ತಿದೆ. ಆದರೆ, ಪ್ರಾಣಿಗಳ ಪಾಲನೆ ಪೋಷಣೆಗಿರುವುದು ಓರ್ವ ವೈದ್ಯ ಮಾತ್ರ. ಅದು ಕೂಡ ಅನನುಭವಿ ಎನ್ನಲಾಗುತ್ತಿದೆ. ಎರಡು RFO ಮತ್ತು ಡೆಪ್ಯುಟಿ ಡೈರೆಕ್ಟರ್ ಹುದ್ದೆ ಖಾಲಿ ಇದೆ. DRFO ಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಒತ್ತಡದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ 2024-25ನೇ ಸಾಲಿನಲ್ಲಿ 15 ಕೋಟಿಗೂ ಅಧಿಕ ಹಣವನ್ನು ಕಚೇರಿ (ಅಂದಾಜು 7ಕೋಟಿ) ಸೇರಿದಂತೆ ಅನಗತ್ಯ ಕಾಮಗಾರಿಗಳಿಗೆ ಹಣ ದುರ್ಬಳಕೆ ಮಾಡಲಾಗುತ್ತಿದೆ.2000ಕ್ಕೂ ಅಧಿಕ ಪ್ರಾಣಿಗಳಿರುವ ಉದ್ಯಾನವನದಲ್ಲಿ ವರ್ಷಕ್ಕೆ ನೂರಕ್ಕೂ ಅಧಿಕ ಪ್ರಾಣಿಗಳು ಸಾಯುವುದು ಸರ್ವೆ ಸಾಮಾನ್ಯವಾಗಿದೆ. ಕಾಮಗಾರಿಗಳನ್ನು ಪ್ರಾಧಿಕಾರದ ಅನುಮತಿ ಪಡೆದು ನಡೆಸಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಸಮರ್ಥಿಸಿಕೊಂಡಿದ್ದಾರೆ.ಒಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಪರೂಪದ ಪ್ರಾಣಿಗಳ ಆಶ್ರಯ ತಾಣ. ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಆದ್ರೆ, ಪ್ರಾಣಿಗಳು ಮತ್ತು ಪ್ರವಾಸಿಗರಿಗೆ ಪ್ರಿಯಾರಿಟಿ ನೀಡಬೇಕಿದ್ದ ಉದ್ಯಾನವನದ ಅಧಿಕಾರಿಗಳು ಕೋಟಿ ಕಾಮಗಾರಿಗಳಿಗೆ ಪ್ರಿಯಾರಿಟಿ ನೀಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಅಪರೂಪದ ಪ್ರಾಣಿಗಳ ಪಾಲನೆ ಪೋಷಣೆಗೆ ಹೆಚ್ಚು ಗಮನ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button