ಬೆಂಗಳೂರಲ್ಲಿ ಪೊಲೀಸ್ ಇಲಾಖೆ ನಿಲ್ಲಿಸಿದ ವಾಹನಗಳಿಂದ ಸಮಸ್ಯೆ: ತುಷಾರ್ ಗಿರಿನಾಥ್ ಹೇಳಿದ್ದೇನು
ಬೆಂಗಳೂರಿನ ವಿವಿಧ ಭಾಗದಲ್ಲಿ ಪೊಲೀಸ್ ಇಲಾಖೆಯಿಂದ ನಿಲ್ಲಿಸಿರುವ ವಾಹನಗಳಿಂದ ಸಮಸ್ಯೆ ಆಗುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಬೆಂಗಳೂರಿನ ನಿವಾಸಿಗಳು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಮಾಡಿದ್ದಾರೆ. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಾರ್ಯಕ್ರಮ ಶುಕ್ರವಾರ ನಡೆದಿದೆ. ಈ ಸಂದರ್ಭದಲ್ಲಿ ಗಾಂಧಿನಗರದ ಸುಭಾಷ್ ನಗರದ ಹತ್ತಿರ ಬರುವ ರೈಲ್ವೆ ಅಪ್ರೋಚ್ ರಸ್ತೆ(ಮಂತ್ರಿ ಮಾಲ್ ಹತ್ತಿರ) ವಾಹನಗಳನ್ನು ನಿಲ್ಲಿಸಿರುವ ಬಗ್ಗೆ ದೂರು ಕೇಳಿ ಬಂದಿದೆ. ಸಾರ್ವಜನಿಕರು ಪೊಲೀಸರು ನಿಲ್ಲಿಸಿರುವ ವಾಹನಗಳಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ.
ಬೆಂಗಳೂರಿನಲ್ಲಿ ಕೆಲವು ಭಾಗದಲ್ಲಿ ಟ್ರಾಫಿಕ್ ಪೊಲೀಸರು ವಶಪಡಿಸಿಕೊಂಡಿರುವ ಹಾಗೂ ವಿವಿಧ ಹಂತದಲ್ಲಿ ಕೇಸ್ ನಡೆಯುತ್ತಿರುವ ವಾಹನಗಳನ್ನು ನಿಲ್ಲಿಸಲಾಗಿದೆ. ಈ ರೀತಿ ನಿಲ್ಲಿಸಿರುವ ವಾಹನಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಶುಕ್ರವಾರ ಬೆಂಗಳೂರಿನ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮ ನಡೆದಿದ್ದು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಯಾದ ಮುರಳಿ ಎನ್ನುವವರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸುಭಾಷ್ ನಗರ ವ್ಯಾಪ್ತಿಯ ರೈಲ್ವೆ ಅಪ್ರೋಚ್ ರಸ್ತೆ(ಮಂತ್ರಿ ಮಾಲ್ ಹತ್ತಿರ) ಹತ್ತಿರ ಸುಮಾರು 5 ಎಕರೆ ಪ್ರದೇಶದ ಜಕ್ಕರಾಯನ ಕೆರೆ ಆಟದ ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ 6000ಕ್ಕೂ ಹೆಚ್ಚು ಅನಾಥ ವಾಹನಗಳನ್ನು ನಿಲ್ಲಿಸಿರುವ ಬಗ್ಗೆ ದೂರಿದ್ದಾರೆ.
67 ದೂರುಗಳ ಸ್ವೀಕಾರ: ಈ ವಲಯದಲ್ಲಿ ಶುಕ್ರವಾರ ಬಿಬಿಎಂಪಿಯು ವಿಶೇಷ ಕಾರ್ಯಕ್ರಮವನ್ನು ನಡೆಸಿದ್ದು ಸಾರ್ವಜನಿಕರಿಂದ 67 ದೂರುಗಳನ್ನು ಸ್ವೀಕರಿಸಿದೆ. ಈ ದೂರುಗಳಿಗೆ ಸಂಬಂಧಿಸಿದಂತೆ ಆಯಾ ಸಂಬಂಧಪಟ್ಟ ಅಧಿಕಾರಿಗಳು ಕಾಲಮಿತಿಯೊಳಗಾಗಿ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದ್ದಾರೆ. ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುವುದನ್ನು ತೆರವುಗೊಳಿಸಲಾಗಿದೆ. ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲು ಮನವಿ ಮಾಡಿದ್ದಕ್ಕೆ ಉತ್ತರಿಸಿದ ಅವರು, ವ್ಯಾಪಾರ ವಲಯಗಳಲ್ಲದ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿಲ್ಲ. ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತ್ಯೇಖವಾಗಿ ವೆಂಡಿಂಗ್ ಜೋನ್‌ಗಳನ್ನು ಗುರುತಿಸುವ ಕೆಲಸ ಆಗುತ್ತಿದೆ. ಶೀಘ್ರ ಸಮೀಕ್ಷೆ ನಡೆಸಿ ವೆಂಡಿಂಗ್ ಜೋನ್‌ಗಳನ್ನು ಗುರುತಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಇನ್ನು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಒಂಟಿ ಮನಗೆಳ ಯೋಜನೆಯಡಿ ಅರ್ಧಕ್ಕೆ ನಿಂತಿರುವ ಒಂಟಿ ಮನೆಗಳನ್ನು ಸಮೀಕ್ಷೆ ನಡೆಸುವಂತೆಯೂ ಅವರು ಸೂಚನೆ ನೀಡಿದ್ದಾರೆ. ಇದನ್ನು ಜಿಪಿಎಸ್ ಸಹಿತ ಛಾಯಾಚಿತ್ರಗಳನ್ನು ತೆಗೆದು ಪಟ್ಟಿ ಸಿದ್ಧಪಡಿಸಬೇಕು. ಅನಂತರ ಅರ್ಧಕ್ಕೆ ನಿಂತಿರುವ ಒಂಟಿ ಮನೆಗಳಿಗೆ ಬಾಕಿ ನೀಡಬೇಕಿರುವ ಅನುದಾನವನ್ನು ಕೂಡಲೇ ನೀಡುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು ಕೆ.ಆರ್ ಮಾರುಕಟ್ಟೆ ಕಾಂಪ್ಲೆಕ್ಸ್ ಮುಖ್ಯದ್ವಾರದ ಬಳಿಯಿರುವ ರಾಜಕಾಲುವೆ ಮೇಲೆ ಅಂಗಡಿ ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಲಿಸಲು ಸಾರ್ವಜನಿಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಇದಕ್ಕೆ ವಲಯ ಮುಖ್ಯ ಎಂಜಿನಿಯರ್ ಹಾಗೂ ರಾಜಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸ್ಥಳ ಪರಿಶೀಲಿಸಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು.