ಯೋಗೇಶ್ವರ್ ಬಗ್ಗೆ ಒಳ್ಳೆಯ ಜನಾಭಿಪ್ರಾಯ ಇದೆ
ಚನ್ನಪಟ್ಟಣ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಉತ್ತಮ ಜನಾಭಿಪ್ರಾಯವಿದೆ. ಕ್ಷೇತ್ರದ ಜನತೆ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಕೈಯಲ್ಲಿ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ಭವಿಷ್ಯ ಅಡಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಕೆಲಸ ಮಾಡಿ ಗೆಲುವು ತಂದು ಕೊಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಅಂತ್ಯವಾಡಬೇಕು ಎಂದು ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷರಾದ ಧರ್ಮಸೇನ ಅವರು ಕರೆ ನೀಡಿದರು.
ನಗರದ ಚಿಕ್ಕಮಳೂರು ಬಳಿಯಲ್ಲಿನ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿ ಎಸ್ಸಿ ಮೋಚಾ ಪದಾಧಿಕಾರಿಗಳಾದ ಮಾಜಿ ಜಿ.ಪಂ. ಮಾಜಿ ಸದಸ್ಯ ಸದಾನಂದ, ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಎನ್.ಬಿ.ಸಿದ್ದರಾಮಯ್ಯ ಮುಖಂಡರಾದ ವೆಂಕಟೇಶ್ಮೂರ್ತಿ,ಶಿವಲಿಂಗಯ್ಯ, ತನುಜ, ಎ., ಅಶ್ವಿನಿ ಚಂದ್ರನಾಥ್,ಕೃಷ್ಣ ಟಿ.ಎಸ್. ಬಸವರಾಜು ವೈ., ಯಲಿಯೂರು ಮಹದೇವ ಸೇರಿದಂತೆ ಹಲವರನ್ನು ಸ್ವಾಗತಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಹಾಗೂ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಿ.ಪಿ.ವೈ. ಬೆಂಬಲಿಗರಾದ ನಿಮ್ಮನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಯಾರಿಗೂ ಅನುಮಾನ ಬೇಡ. ಎಲ್ಲರೂ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಜನರ ಮನವೊಲಿಸಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರಿಗೆ ಗೆಲುವು ತಂದು ಕೊಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ.ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಉತ್ತಮ ಜನರ ಆಡಳಿತವನ್ನು ನೀಡಲಾಗುತ್ತಿದೆ. 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದೆ. ಈ ಯೋಜನೆಗಳು ನಾಡಿನ ಮನೆ ಮಾತಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಉಪ ಮುಖ್ಯಮಂತ್ರಿಗಳು ಈಗಾಗಲೇ 500 ಕೋಟಿ ರೂ. ಅನುದಾನವನ್ನು ತಂದು ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಈ ಯೋಜನೆಗಳು ನಮ್ಮ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಜನತೆಯ ಹಿತಕ್ಕಾಗಿ ಹಾಗೂ ನೊಂದ ಜನತೆಯ ಧ್ವನಿಯಾಗಲು ನೀರಾವರಿ ಕ್ರಾಂತಿ ಮಾಡಿರುವ ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ನಿಮ್ಮೆಲ್ಲರ ಸಂಘಟನಾತ್ಮಕ ಪರಿಶ್ರಮದಿಂದ ನೂರಕ್ಕೆ ನೂರು ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷ ಧರ್ಮಸೇನ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದ ವೀಕ್ಷಕರು ಮತ್ತು ಮಾಜಿ ಶಾಸಕರು ಆದ ನಂಜುಂಡಸ್ವಾಮಿ ಅವರು ಮಾತನಾಡಿ ಈ ಉಪ ಚುನಾವಣೆಯು ರಾಜ್ಯ ಚುನಾವಣೆಯ ದಿಕ್ಸೂಚಿಯಾಗಲಿದೆ. ಈ ಚುನಾವಣೆಯಲ್ಲಿ ದಲಿತ ಮತ್ತು ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿದ್ದು, ದಲಿತ ಬಂಧುಗಳು ಯಾವುದೇ ಅಸೆ ಆಮಿಷಗಳಿಗೆ ಒಳಗಾಗದೇ ತಮ್ಮ ತಮ್ಮ ಗ್ರಾಮ ಮತ್ತು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಆಡಳಿತ ಮತ್ತು ಪಂಚ ಯೋಜನೆಗಳ ಬಗ್ಗೆ ಹಾಗೂ ಕೇವಲ ಅಧಿಕಾರಕ್ಕಾಗಿ ಚುನಾವಣೆ ಬಂದಾಗ ಮಾತ್ರ ಬರುವ ಎನ್,ಡಿ.ಎ ನಾಯಕರ ಅಭಿವೃದ್ಧಿ ಶೂನ್ಯ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಸದಾನಂದ ಅವರು ಮಾತನಾಡಿ, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಏಕೆ ಸೇರ್ಪಡೆಯಾಗುತ್ತಿದ್ದೇವೆ ಎನ್ನುವುದನ್ನು ವಿವರಿಸಿ, ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ನಾಯಕರು, ತಾಲ್ಲೂಕಿನ ಮನೆ ಮಗ ಸಿ.ಪಿ.ಯೋಗೇಶ್ವರ್ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಲ್ಲರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಎಸ್ಸಿ ಜಿಲ್ಲಾಧ್ಯಕ್ಷ ನರಸಿಂಹಚಿiÀ್ಯು, ಪ್ರಧಾನ ಕಾರ್ಯದರ್ಶಿ ಜಯರಾಂ, ವೀಕ್ಷಕರಾದ ಶಿವಪ್ಪ, ಮಾಜಿ ಮೇಯರ್ ಹುಚ್ಚಪ್ಪ, ಶ್ರೀನಿವಾಸಮೂರ್ತಿ, ಜಿ.ಕೃಷ್ಣಪ್ಪ, ಸುಮಿತ್ರದೇವಿ, ಸಂಚಾಲಕ ಎನ್.ರಾಕೇಶ್ಕುಮಾರ್, ಮುಖಂಡರಾದ ಎಂ.ಎಸ್.ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ವೈ.ಟಿ.ಹಳ್ಳಿ ಶಿವು, ವಸಂತ, ಪುಟ್ಟರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.