ತಿ.ನರಸೀಪುರ : ಬುದ್ಧ ಎಂದರೆ ಪ್ರಜಾಪ್ರಭುತ್ವ ಮನುಷ್ಯತ್ವ ಪ್ರೀತಿ ದಯೆ ಕರುಣೆ ಹಾಗೂ ಸಾಮರಸ್ಯ ಸಂಕೇತ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಕೂಡ್ಲೂರು ಗ್ರಾಮದ ಬಳಿ ಭಾನುವಾರ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ನಿರ್ಮಿಸಲಾಗಿರುವ ಗೌತಮ ಬುದ್ಧ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ನ ನಳಂದಬುದ್ಧ ವಿಹಾರ ಲೋಕಾರ್ಪಣೆ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯರು ಹುಟ್ಟಿದ ಮೇಲೆ ಧರ್ಮ ಹುಟ್ಟಿದೆ. ಆ ಧರ್ಮವನ್ನು ನಾವು ಮಾಡಿಕೊಂಡಿದ್ದೇವೆ ಧರ್ಮವೂ ನಮ್ಮ ನಡೆ ನುಡಿ ಆಚಾರ ವಿಚಾರಗಳು ಜೀವನ ಶೈಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಿರ್ಮಾಣವಾಗಿದೆ ಎಂದರು.
ಧರ್ಮದಿಂದ ಸಾಂಸ್ಕೃತಿಕ ಚಿಂತನೆಗಳು ಬಂದಿಲ್ಲ ಸಾಂಸ್ಕೃತಿಕ ಚಿಂತನೆಗಳಿಂದ ಧರ್ಮ ರೂಪಿಸಲ್ಪಟ್ಟಿದೆ 2,600 ವರ್ಷಗಳ ಹಳೆಯದಾದ ಬೌದ್ಧ ಧರ್ಮವು ಬದುಕಿನ ಮೌಲ್ಯಗಳನ್ನು, ಜೀವನೋಪಾಯದ ಮಾರ್ಗಗಳನ್ನು ಮತ್ತು ಸತ್ಯದ ಅರಿವನ್ನು ಮೂಡಿಸಿದೆ. ಜಗತ್ತಿನ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ನಾನು ಯಾವ ಧರ್ಮವನ್ನು ಪಾಲಿಸುವುದಿಲ್ಲ ಪಾಲಿಸುವುದಾದರೆ ನಾನು ಬೌದ್ಧ ಧರ್ಮವನ್ನು ಪಾಲಿಸುತ್ತೇನೆ ಏಕೆಂದರೆ ಬೌದ್ಧ ಧರ್ಮವು ವಾಸ್ತವಿಕ ಅಂಶಗಳ ಜಗತ್ತಿನಲ್ಲಿ ಸಂದೇಶಗಳನ್ನು ನೀಡಿದೆ ಎಂದು ಹೇಳಿದರೆ ವಿವೇಕಾನಂದರು ನಾನು ಬುದ್ಧರ ಸೇವಕರ ಸೇವಕ ಎಂದು ಹೇಳುವುದರ ಹಿಂದೆ ಬೌದ್ಧ ಧರ್ಮದ ಮಹತ್ವ ಎದ್ದು ಕಾಣುತ್ತದೆ ಎಂದರು.
ಜಗತ್ತಿನಲ್ಲಿ ಸಮಾಜ ಸುಧಾರಣೆಯ ವ್ಯಕ್ತಿಯಾಗಿ ಬುದ್ಧ ವೈಜ್ಞಾನಿಕ ಹಾಗೂ ವೈಚಾರಿಕತೆಯ ಸಮತಾವಾದ ನೆಲೆಗಟ್ಟಿನಲ್ಲಿ ಸಮೃದ್ಧ ಭಾರತದ ನಿರ್ಮಾಣಕ್ಕೆ ಮುನ್ನುಡಿಯಾಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಿಂದೂ ಧರ್ಮದಲ್ಲಿದ್ದಂತ ಅಸ್ಪೃಶ್ಯತೆ ದೌರ್ಜನ್ಯ ಅಸಮಾನತೆ ಹೋಗಲಾಡಿಸಲು ಸಾಕಷ್ಟು ಪ್ರಯತ್ನಗಳನ್ನ ಮಾಡಿ ಅದು ಕೈಗೂಡದಿದ್ದ ಸಂದರ್ಭದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತಾರೆ. ಕಠ್ಮಂಡುವಿನಲ್ಲಿ ನಡೆಷ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿ ಬೌದ್ಧ ಧರ್ಮದ ಸಂದೇಶಗಳನ್ನು ಪ್ರಚಾರಪಡಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಹೇಳುವ ಅವರು ಹಾಗೆಯೇ ತಮ್ಮ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣವನ್ನು ಬೌದ್ಧ ಧರ್ಮ ಪ್ರಚಾರಕ್ಕೆ ಬಳಸುವಂತೆ ಜನರಿಗೆ ಸಲಹೆ ಕೂಡ ಮಾಡುತ್ತಾರೆ ಎಂದು ತಿಳಿಸಿದ ಸವರು ಅಂಬೇಡ್ಕರ್ ವಾದಿಗಳು ಬುದ್ಧನ ಅನುಯಾಯಿಗಳು ಎಂಬುದು ನಮಗೆ ತುಂಬಾ ಹೆಮ್ಮೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬೌದ್ಧ ಧರ್ಮದ ಸಿದ್ದಾಂತ ಹಾಗೂ ಧೆಯೋದ್ದೇಶಗಳು ಜಗತ್ತಿನಲ್ಲಿ ಇಂದಿಗೂ ಪ್ರಸ್ತುತವಾಗಿವೆ. ಧರ್ಮದ ಸಮಾನತೆ ಮತ್ತು ಕರುಣೆ ಎಲ್ಲಾ ಜನರನ್ನು ಆಕರ್ಷಿಸುತ್ತದೆ. ಹಿಂದುತ್ವದ ಮೂಲಭೂತವಾದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದ್ದು, ಅನ್ಯ ಧರ್ಮವನ್ನು ದ್ವೇಷಿಸು, ಧರ್ಮಕ್ಕಾಗಿ ಅನ್ಯಾಯ ಮತ್ತು ದೌರ್ಜನ್ಯವನ್ನು ಸಮರ್ಥಿಸುವ ಸಮಾನತೆಯ ಸಮಾಜಕ್ಕೆ ಧಕ್ಕೆಯನ್ನು ತರಲಿದೆ. ನಳಂದ ಬುದ್ಧ ವಿಹಾರಕ್ಕೆ ಈಗಾಗಲೇ ಈ ಭಾಗದ ಜನಪ್ರತಿನಿಧಿಯಾಗಿ ಅಗತ್ಯ ನೆರವನ್ನು ನೀಡಿದ್ದೇನೆ. ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಎರಡು ಕೋಟಿ ರೂಗಳ ಅನುದಾನ ನೀಡುವಂತೆ ಯೋಜನೆ ರೂಪಿಸಿ, ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ನಳಂದ ಬುದ್ಧ ವಿಹಾರದ ಮಾದರಿಯಲ್ಲಿಯೇ ಚಾಮರಾಜನಗರ ಬುದ್ಧ ವಿಹಾರದ ಅಭಿವೃದ್ಧಿ ಹಾಗೂ ಧರ್ಮದ ವಿಸ್ತರಣೆಗೆ ಹೆಚ್ಚಿನ ನೆರವನ್ನ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ತಂದೆ ಆರ್.ಧ್ರುವನಾರಾಯಣ್ ಅವರಂತೆ ಸಮುದಾಯದ ಹಿತಕ್ಕೆ ದುಡಿಯಲು ಹಾಗೂ ಸೇವೆಯನ್ನು ಮಾಡಲು ಸದಾಕಾಲ ಸಿದ್ಧನಿದ್ದೇನೆ ಎಂದು ತಿಳಿಸಿದರು.
ಉದ್ಘಾಟನೆಗೆ ಗೈರಾದ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಶುಭ ಸಂದೇಶವನ್ನು ರವಾನಿಸಿದ್ದರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಭದಂತ ಬೋಧಿಧಮ್ಮ ಝೆನ್ ಮಾಸ್ಟರ್, ಸಾನಿಧ್ಯವನ್ನು ಭಂತೇಜಿಗಳಾದ ಮನೋರಕ್ಕಿತ, ಬುದ್ಧ ಪ್ರಕಾಶ್, ಬೋದಿದತ್ತ, ಡಾ.ಕಲ್ಯಾಣ ಸಿರಿ, ಸುಗತಪಾಲ, ಬುದ್ಧರತ್ನ, ಕಮಲರತ್ನ, ಬುದ್ಧಮ್ಮ ಬಿಕ್ಖುಣಿ ಹಾಗೂ ಗೌತಮಿ ಬಿಕ್ಖುಣಿ ವಹಿಸಿದ್ದರು.
ವಿಧಾನಪರಿಷತ್ ಸದಸ್ಯ ಡಾ ಡಿ.ತಿಮ್ಮಯ್ಯ, ಟ್ರಸ್ಟ್ ಅಧ್ಯಕ್ಷರಾದ ಭಂತೇ ಬೋಧಿರತ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ನಿಂಗರಾಜು, ಜಿ.ಪಂ ಮಾಜಿ ಸದಸ್ಯೆ ಶಶಿಕಲಾ ನಾಗರಾಜು, ಎಸ್.ಎನ್.ಸಿದ್ಧಾರ್ಥ, ಕೆ.ಮಹದೇವ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪುಟ್ಟಸ್ವಾಮಿ, ಉಪಾಧ್ಯಕ್ಷ ಶಿವಣ್ಣ, ಸಹ ಕಾರ್ಯದರ್ಶಿ ಎನ್.ಲಿಂಗಪ್ಪಾಜಿ, ಖಜಾಂಚಿ ಮಹದೇವಯ್ಯ(ಸೀನಪ್ಪ), ಟ್ರಸ್ಟಿಗಳಾದ ಪುಟ್ಟರಾಜು, ಮರಿಮಹದೇವಯ್ಯ(ಅರ್ಜುನ್), ಚಂದ್ರಕಲಾ, ಬಿ.ಸಿ.ಇಂದ್ರಮ್ಮ, ಹ.ರಾ.ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ತಾ.ಪಂ ಸದಸ್ಯ ಕುಕ್ಕುರ್ ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಮ್ಮ, ತ್ರಿವೇಣಿನಗರ ಮಹದೇವಮ್ಮ ಹಾಗೂ ಇತರರು ಇದ್ದರು.