ಕೆ.ಆರ್.ಪೇಟೆ: ಮನುಷ್ಯನ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅತ್ಯಂತ ಅವಶ್ಯಕ ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಆರ್ ಟಿ ಓ ಮಲ್ಲಿಕಾರ್ಜುನ್ ಕಚೇರಿಯಲ್ಲಿ ಹಾಗೂ ಅವರ ಅಭಿಮಾನಿ ಬಳಗದ ಸಹಕಾರದಿಂದ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದ ಯೋಗ ಗುರು ಹಾಗೂ ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತರಾದ ಎಂ.ಎಸ್.ಅಲ್ಲಮಪ್ರಭು ಅವರ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳು ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಹಣ- ಅಂತಸ್ತು ಇದ್ದವರು ಶ್ರೀಮಂತರಲ್ಲ, ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು ಎಂದರು.ಎಲ್ಲರು ಉತ್ತಮ ಆರೋಗ್ಯ ಬೇಕು ಎನ್ನುತ್ತಾರೆ. ಆದರೆ ಯಾರೂ ಕೂಡ ಆರೋಗ್ಯದ ಸೂತ್ರಗಳನ್ನು ಪಾಲನೆ ಮಾಡುತ್ತಿಲ್ಲ. ಶಿಸ್ತು ಬದ್ಧ ಜೀವನದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.ಯೋಗವು ಎಲ್ಲ ಒತ್ತಡಗಳನ್ನು ಹೋಗಲಾಡಿಸಿ ವ್ಯಕ್ತಿಯನ್ನು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ. ಯೋಗದ ಎಂಟು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ನಮ್ಮ ಜೀವನ ಕ್ರಮದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತವೆ. ಹಾಗಾಗಿ ಯೋಗ ಬಹಳ ಮಹತ್ವದ್ದಾಗಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಅಧ್ಯಾತ್ಮ ಸಮತೋಲನ ಸ್ಥಿತಿ ಉಂಟು ಮಾಡುವ ಯೋಗವನ್ನು ವಿಶ್ವದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ವಿಶ್ವಮಾನ್ಯತೆ ಪಡೆದುಕೊಂಡಿದೆ ಎಂದರು.
ಸಾಹಿತಿ ಬಲ್ಲೆನಹಳ್ಳಿ ಮಂಜುನಾಥ್ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಸಮಾಜ ಸೇವೆಯ ಜೊತೆಗೆ ಆರೋಗ್ಯವಂತ ಸಮಾಜಕ್ಕೆ ಪ್ರಭುತ್ವ ಪಾತ್ರ ವಹಿಸುವ ಉಚಿತ ಯೋಗ ಶಿಬಿರಕ್ಕೂ ಸಹಕಾರ ನೀಡಿ ಪ್ರೋತ್ಸಾಹಿಸಿರುವುದು ಉತ್ತಮ ಬೆಳವಣಿಗೆ. ದೇಶ ವಿಶ್ವಕ್ಕೆ ನೀಡಿದ ಕೊಡುಗೆಗಳಲ್ಲಿ ಯೋಗವೂ ಒಂದು. ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ರವರ ಕಚೇರಿ ಇಂಥ ವಾತಾವರಣದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿದರೆ ಯಾವುದೇ ಕಾಯಿಲೆಗಳು ಬರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಬಳಿಕ ಯೋಗ ಗುರು ಎಂ.ಎಸ್ ಅಲ್ಲಮಪ್ರಭು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಹರಿಚರಣ ತಿಲಕ್, ಗ್ರಾ. ಪಂ ಸದಸ್ಯ ಶ್ರೀನಿವಾಸ್ ಸಜ್ಜನ್,ಶಿಕ್ಷಕರುಗಳಾದ ಕಾಡುಮೆಣಸ ಚಂದ್ರು, ಲಕ್ಷ್ಮಿಪುರ ಮಹೇಶ್, ವೀರಭದ್ರಯ್ಯ, ಅಣ್ಣಯ್ಯ, ಕುಮಾರಿ, ಚಸ್ಕಂ ತಿಮ್ಮಪ್ಪ, ರಘು ಹೊಸಹೊಳಲು, ಮಂಜುನಾಥ್ ಕಾಮನಹಳ್ಳಿ, ಮುಖಂಡರುಗಳಾದ ಬಸವರಾಜ್, ವಿಜಿ ಕುಮಾರ್, ಆರ್ ಟಿ ಓ ಅಭಿಮಾನಿ ಬಳಗ ಅಧ್ಯಕ್ಷ ಗಂಜಿಗೆರೆ ಮಹೇಶ್,ಸೇರಿದಂತೆ ಯೋಗಪಟ್ಟುಗಳು ಇದ್ದರು.