ತಡೆಹಿಡಿದಿರುವ ಉಪನ್ಯಾಸಕರ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯ
ಮಾಲೂರು:
ರಾಜ್ಯ ಸರ್ಕಾರ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ 2024ರ ಅಕ್ಟೋಬರ್ 3 ರಂದು
ಹೊರಡಿಸಿರುವ ಸುತ್ತೋಲೆ, ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳು ಉಪನ್ಯಾಸಕರಿಗೆ ನುಂಗಲಾರದ ತುತ್ತಾಗಿದ್ದು, ಕೂಡಲೇ ಸುತ್ತೋಲೆಯನ್ನು ಪುನರ್ ಪರಿಶೀಲಿಸಬೇಕು. ಹಾಗೂ ತಡೆಹಿಡಿದಿರುವ ಉಪನ್ಯಾಸಕರ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಅಧ್ಯಕ್ಷ ಡಾ.ಹರೀಶ್ ನೇತೃತ್ವದಲ್ಲಿ ಸರ್ಕಾರವನ್ನು ಒತ್ತಾಯಿಸುವ ಸಭೆಗೆ ಜಿಲ್ಲೆಯಿಂದ ಭಾಗವಹಿಸಿ ಸಭೆ ಯಶಸ್ವಿಗೊಳಿಸಿದ ಉಪನ್ಯಾಸಕರಿಗೆ ರಾಜ್ಯ ಸಹ ಕಾರ್ಯದರ್ಶಿ ಚಿಕ್ಕಾಪುರ ಶ್ರೀನಿವಾಸ್ ಧನ್ಯವಾದ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುತ್ತೋಲೆಯಲ್ಲಿ ತಿಳಿಸಿರುವಂತೆ ಕಾರ್ಯ ಭಾರವಿಲ್ಲದ ಉಪನ್ಯಾಸಕರನ್ನು ಹತ್ತಿರದ ಅನುದಾನಿತ ಕಾಲೇಜಿಗೆ ಜಿಲ್ಲೆಯಲ್ಲಿ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ. ಅದರಲ್ಲಿ ಹಲವಾರು ನೂನ್ಯತೆಗಳಿವೆ. ಸರಕಾರ ತನ್ನ ಸುತ್ತೋಲ್ಲೆಯನ್ನು ಪರಿಶೀಲನೆಗೆ ಒಳಪಡಿಸಬೇಕು. ಹಾಗೆಯೇ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ನಿಯೋಜಿಸಲು ಇರುವ ನಿರ್ಬಂಧವನ್ನು ರದ್ದು ಪಡಿಸ ಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸರ್ಕಾರ ಹಿಂದೆ ಎರಡು ಸಂಯೋಜನೆಗೆ ಅನುಮೋದನೆ ಕೊಟ್ಟು ಈಗ 20 ಗಂಟೆಗಳ ಕಾರ್ಯಭಾರ ಸಮಸ್ಯೆಯನ್ನು ತಂದಿಟ್ಟಿರುವುದು ಸರಿಯಲ್ಲ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ೮೨೧ ಅನುದಾನಿತ ಪದವಿಪೂರ್ವ ಕಾಲೇಜುಗಳ ಸುಮಾರು 6000 ನೌಕರರು ಸರ್ಕಾರದ ಸುತ್ತೋಲೆಯಿಂದ ಆಂತಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಇಲಾಖೆಯ ನಿರ್ದೇಶಕರ ಮೌಖಿಕ ಆದೇಶಕ್ಕೆ ಮಣಿದು ಇದುವರೆಗೂ ಕಾರ್ಯ ಭಾರವಿಲ್ಲದೆ ನಿಯೋಜನೆಗೆ ಒಳಗಾಗದ ಉಪನ್ಯಾಸಕರಿಗೆ ವೇತನ ಮತ್ತು ಭತ್ಯೆಗಳನ್ನು ತಡೆಹಿಡಿಯಲಾಗಿದೆ. ಮೊದಲು ತಡೆ ಹಿಡಿದಿರುವ ವೇತನ ಬಿಡುಗಡೆ ಮಾಡಿ,ನಂತರ ನಿಮ್ಮ ಕಾರ್ಯಾಭಾರದ ಕುರಿತು ಸಂಘಟನೆಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಜಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿ.ಕೇಶವ, ಕಾರ್ಯದರ್ಶಿ ಶ್ರೀಕಾಂತ್, ಸಹ ಕಾರ್ಯದರ್ಶಿ ಮುನಿವೆಂಟರೆಡ್ಡಿ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಖಜಾಂಚಿ ಜೆ.ಅಬ್ಬಯ್ಯ ಸೇರಿದಂತೆ ಹಲವಾರು ಉಪನ್ಯಾಸಕರು ಭಾಗವಹಿಸಿದ್ದರು.