ಚನ್ನಪಟ್ಟಣ ತಾಲ್ಲೂಕಿಗೆ ಕಾಂಗ್ರೆಸ್ ಕೊಡುಗೆ ಏನು.? ಕ್ಷೇತ್ರದ ಜನರು ಎಂದೂ ನಮ್ಮನ್ನ ಕೈ ಬಿಟ್ಟಿಲ್ಲ : ನಿಖಿಲ್ ಕುಮಾರಸ್ವಾಮಿ
ರಾಮನಗರ :ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕೋಡಂಬಳ್ಳಿ, ಅಕ್ಕೂರು, ಮಳೂರು, ಬೇವೂರು
ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳ ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ HD ಕುಮಾರಸ್ವಾಮಿ ಅವರು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು; ಕುಮಾರಣ್ಣ ರಾಜ್ಯದಲ್ಲಿ ಎರಡನೇ ಬಾರಿಗೆ ಸಿಎಂ ಆಗಲು ಚನ್ನಪಟ್ಟಣದ ಜನತೆ ಕಾರಣ. ಚನ್ನಪಟ್ಟಣ ತಾಲೂಕಿಗೆ ಒಂದುವರೆ ಸಾವಿರ ಕೋಟಿಯಷ್ಟು
ಅನುದಾನ ತಂದಿದ್ರು. ಇದನ್ನ ಯಾರಿಂದಲೂ ತಿರುಚಲು ಸಾಧ್ಯವಿಲ್ಲ ಎಂದರು.
ಈಗ ಡಿಸಿಎಂಗೆ ಮಮಕಾರ ಬಂದಿದೆ
ರಾಜ್ಯದ ಉಪ ಮುಖ್ಯಮಂತ್ರಿಗಳಿಗೆ ಚನ್ನಪಟ್ಟಣ ತಾಲೂಕು ಎಲ್ಲಿದೆ ಅಂತ ಗೊತ್ತಿರಲಿಲ್ಲ. ಈಗ ಉಪಚುನಾವಣೆ ಬಂದಿರೋದರಿಂದ ಚನ್ನಪಟ್ಟಣಕ್ಕೆ ನಿರಂತರ ಪ್ರವಾಸ ಮಾಡ್ತಿದ್ದಾರೆ. ಏನೋ ಅನುದಾನ ತಂದಿದ್ದೀವಿ ಅಂತ ದೊಡ್ಡದೊಡ್ಡ ಫ್ಲೆಕ್ಸ್ ಹಾಕಿಸ್ತಿದ್ದಾರೆ. ಕುಮಾರಸ್ವಾಮಿ ಅವರು ತಾವು ತಂದ 1500ಕೋಟಿ ಅನುದಾನದ ಬಗ್ಗೆ ಜಾಹಿರಾತು ಕೊಟ್ಟಿರಲಿಲ್ಲ. ಪಾಪ ಈಗ ಉಪ ಮುಖ್ಯಮಂತ್ರಿಗಳಿಗೆ ಚನ್ನಪಟ್ಟಣದ ಮೇಲೆ ಮಮಕಾರ ಬಂದಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಕುಮಾರಣ್ಣ ಮೋದಿಯವರ ಸಂಪುಟದಲ್ಲಿ ಕೆಲಸ ಮಾಡ್ತಿದ್ದಾರೆ.
ಮಂಡ್ಯದ ಜಿಲ್ಲೆಯ ಜನರ ಆಶಿರ್ವಾದದಿಂದ ಕೇಂದ್ರ ಕೈಗಾರಿಕಾ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಾಕಷ್ಟು ಯುವ ಜನತೆ ವಿದ್ಯಾವಂತರಿದ್ದಾರೆ. ಅವರಿಗೆ ಸಮರ್ಪಕಉದ್ಯೋಗಾವಕಾಶಗಳಿಲ್ಲ. ಇದೆಲ್ಲವನ್ನೂ ಕುಮಾರಸ್ವಾಮಿ ಅವರು ಮನಸ್ಸಿಗೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮಂಡ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿದ್ದಾರೆ. ಮಂಡ್ಯದಲ್ಲಿ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ದೇವೇಗೌಡರು ಇಗ್ಗಲೂರು ಡ್ಯಾಂ ನಿರ್ಮಾಣ ಮಾಡಿದ್ದಾರೆ. ಇದು ತಾಲೂಕಿನ ರೈತರಿಗೆ ದೇವೇಗೌಡರು ನೀಡಿರೋ ಕೊಡುಗೆಯಾಗಿದೆ. ಜನರು ಇದನ್ನ ಪ್ರತಿದಿನ ನೆನಪು ಮಾಡಿಕೊಳ್ತಾರೆ.
ಹಗಲು ದರೋಡೆ ಮಾಡ್ತಿದೆ
ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಐದು ಗ್ಯಾರಂಟಿ ಅಂತ ಚರ್ಚೆ ಮಾಡ್ತಿದ್ದಾರೆ. ಅದನ್ನ ಸಮರ್ಪಕವಾಗಿ ಕೊಡ್ತಿದ್ದಾರಾ.? ಗ್ಯಾರಂಟಿ ಹೆಸರಲ್ಲಿ ಸರ್ಕಾರ ಹಗಲು ದರೋಡೆ ಮಾಡ್ತಿದೆ. ಪರಿಶಿಷ್ಟ ಜಾತಿ, ಪಂಗಡದ 187 ಕೋಟಿ ಹಣವನ್ನ ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದೆ. ಇದನ್ನು ಸ್ವತಃ ಸಿಎಂ ಅವರೇ ಇದನ್ನು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನತೆ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಕೇವಲ ಒಂದುವರೆ ವರ್ಷದಲ್ಲಿ ಸರ್ಕಾರ ನಡವಳಿಕೆ ಗೊತ್ತಾಗ್ತಿದೆ ಎಂದು ಕಿಡಿಕಾರಿದರು.
ಡಿಸಿಎಂಗೆ ಈಗ ಚನ್ನಪಟ್ಟಣ ನೆನಪಿಗೆ ಬಂದಿದೆ. ಚನ್ನಪಟ್ಟಣ ತಾಲೂಕಿಗೆ ಕಾಂಗ್ರೆಸ್ ಕೊಡುಗೆ ಏನು.? ಇದನ್ನ ನೀವು ಪ್ರಶ್ನೆ ಮಾಡಬೇಕು.ಕೇವಲ ಚುನಾವಣೆ ಗೋಸ್ಕರ ಮಾಡ್ತಿರೋ ದೊಂಬರಾಟ ಇದು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.