ಪ್ರಚಾರ ಯಾರ ಪರ ಮಾಡಬೇಕು ಎನ್ನುವುದು ದರ್ಶನ್ ಇಚ್ಛೆ. ಹೋಗು ಹೋಗಬೇಡ ಎನ್ನಲು ನಾನು ಯಾರು?: ಬಿಜೆಪಿ ನಾಯಕಿ (ಸಂಸದೆ) ಸುಮಲತಾ ಅಂಬರೀಶ್
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್, ದರ್ಶನ್ ಇಂತಹ ಪಕ್ಷದ ಪರ ಪ್ರಚಾರ ಮಾಡು ಎಂದು ನಾನು ಹೇಳಿಲ್ಲ ಎಂದಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಲ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಕಣದಲ್ಲಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಅವರೇ ದರ್ಶನ್ ಅವರನ್ನು ಪ್ರಚಾರಕ್ಕೆ ಕಳುಹಿಸಿದ್ದಾರೆ ಅಂತೆಲ್ಲಾ ಮಾತುಗಳು ಹರಿದಾಡುತ್ತಿವೆ. ಇದೀಗ ಈ ಊಹಾಪೋಹಗಳಿಗೆ ಸ್ವತಃ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ಪಕ್ಷ ಹೇಳಿದ ಕಡೆ ಹೋಗಿ ಪ್ರಚಾರ ಮಾಡುತ್ತೇನೆ
ಇದೇ ವೇಳೆ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಪ್ರಚಾರ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ನಾನು ಯಾವ ರೀತಿ ಪ್ರಚಾರ ಮಾಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ನಾನು ನಾನಾಗಿಯೇ ಎಲ್ಲಿಗೂ ಹೋಗಿಲ್ಲ. ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಖಂಡಿತ ಪ್ರಚಾರ ಮಾಡುತ್ತೇನೆ. ನಾನು ಸಂಸದೆ. ಕಾಂಗ್ರೆಸ್ನ ಎಂಎಲ್ಎಗಳು ಸಿಗುತ್ತಿರುತ್ತಾರೆ.
ಎಲ್ಲ ಕಡೆ ಯಾವುದೇ ಸಮಾರಂಭದಲ್ಲಿ ಭೇಟಿ ಆಗಿರುತ್ತೇವೆ. ಎಲ್ಲೋ ತೆಗೆದಿರುವ ಫೋಟೋಗಳನ್ನು ಈಗ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದು ಸಾಮಾನ್ಯ. ನನ್ನ ಚುನಾವಣೆ ವೇಳೆ ಸುಳ್ಳು ಮಾಹಿತಿ, ಸುಳ್ಳು ಪ್ರಚಾರ ಮಾಡಿದ್ದರು. ನಾನಂತೂ ಯಾರನ್ನು ಭೇಟಿ ಮಾಡಿಲ್ಲ. ಮಂಡ್ಯದಲ್ಲಿ ಒಳ್ಳೆ ರಿಸಲ್ಟ್ ಬರುತ್ತೆ ಎಂದು ಹೇಳಿದರು.
ಅಂತೆಯೇ ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಹಾಗೇ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರಕ್ಕೆ ಹೋಗಿದ್ದರು. ಪಕ್ಷ ಮುಖ್ಯ ಅಲ್ಲ. ನಿಂತಿರುವ ವ್ಯಕ್ತಿ ಮುಖ್ಯ ಎಂದು ದರ್ಶನ್ ಹೇಳುತ್ತಾ ಬಂದಿದ್ದಾರೆ. ವ್ಯಕ್ತಿ ನನಗೆ ಇಷ್ಟವಾದರೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಆ ರೀತಿ ದರ್ಶನ್ ನನ್ನ ಕಳಿಸುವುದಾದರೆ ನಾನ್ಯಾಕೆ ಬಿಜೆಪಿ ಸೇರಬೇಕು. ನಾನು ಪಕ್ಷೇತರ ನೇರವಾಗಿ ಸಪೋರ್ಟ್ ಮಾಡಬಹುದಲ್ವಾ. ನನಗೆ ಯಾರು ಏನು ಒತ್ತಾಯ ಮಾಡೋಕೆ ಆಗಲ್ಲ. ಈ ಪಕ್ಷಕ್ಕೆ ಸೇರು ಆ ಪಕ್ಷ ಬೇಡ ಎಂದು ಒತ್ತಡ ಮಾಡೋಕೆ ಆಗುತ್ತಿರಲಿಲ್ಲ. ನಾನು ನನ್ನ ಇಚ್ಛೆಯಿಂದ ಬಿಜೆಪಿಗೆ ಬಂದಿದ್ದೇನೆ. ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡು ಎಂದು ಹೇಳುವ ಪ್ರಶ್ನೆ ಬರಲ್ಲ ಎಂದರು.