ಹಾಸನ: ಕೋರ್ಟ್ನಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯ ಬರ್ಬರ ಕೊಲೆ
ಹಾಸನ, ಫೆಬ್ರವರಿ 07: ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಮುಂದಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ತೂಬಿನಕೆರೆ ಬೋವಿ ಕಾಲೋನಿ ನಿವಾಸಿ ಜಯಪ್ಪ (34) ಕೊಲೆಯಾದ ವ್ಯಕ್ತಿ. ಇದೆ ತಾಲೂಕಿನ ಕಾಳೆನಹಳ್ಳಿ ಹಟ್ಟಿಯ ಅಣ್ಣಯ್ಯ (24) ಕೊಲೆ ಮಾಡಿದ ಆರೋಪಿ. ಅಷ್ಟಕ್ಕೂ ಈ ಕೊಲೆ ನಡೆದಿದ್ದಾರು ಏಕೆ?
2021ರಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿದ ಪ್ರಕರಣದಲ್ಲಿ ಅಣ್ಣಯ್ಯ ಜೈಲು ಸೇರಿದ್ದನು. 2022ರ ಜುಲೈನಲ್ಲಿ ಅಣ್ಣಯ್ಯ ಬೇಲ್ ಮೇಲೆ ಹೊರಗಡೆ ಬಂದಿದ್ದಾನೆ. ಈ ಪ್ರಕರಣಕ್ಕೆ ಜಯಪ್ಪ ಪ್ರಮುಖ ಸಾಕ್ಷಿಯಾಗಿದ್ದರು. ಒಂದು ವೇಳೆ ಜಯಪ್ಪ ಸಾಕ್ಷಿ ಹೇಳಿದರೆ ಕಠಿಣ ಶಿಕ್ಷೆಯಾಗುವ ಭೀತಿಯಲ್ಲಿ ಅಣ್ಣಯ್ಯ ಇದ್ದನು. ಹೀಗಾಗಿ ರಾಜಿಯಾಗುವಂತೆ ಆರೋಪಿ ಅಣ್ಣಯ್ಯ ಜಯಪ್ಪನ ಹಿಂದೆ ಬಿದ್ದಿದ್ದನು. ಜಯಪ್ಪ ಜನವರಿ 31 ರಂದು ಹಾಸನ ನ್ಯಾಯಾಲಯದಲ್ಲಿ ಅಣ್ಣಯ್ಯನ ವಿರುದ್ಧ ಸಾಕ್ಷಿ ಹೇಳಿ ಮರಳಿ ಹೋಗುತ್ತಿದ್ದರು. ಈ ವೇಳೆ ಅಣ್ಣಯ್ಯ ಜಯಪ್ಪನನ್ನು ಕರೆದೊಯ್ದು ಎಣ್ಣೆ ಕುಡಿಸಿದ್ದನು. ಕಂಠಪೂರ್ತಿ ಕುಡಿಸಿ ತನಗೆ ಅನುಕೂಲ ಆಗುವಂತೆ ಸಹಾಯ ಮಾಡು ಎಂದು ಮನವಿ ಮಾಡಿದ್ದನು.
ತನ್ನ ಬೇಡಿಕೆಗೆ ಒಪ್ಪದಿದ್ದಾಗ ಅಣ್ಣಯ್ಯ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಜಯಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಎಷ್ಟು ಹೊತ್ತಾದರು ಪುತ್ರ ಮನೆಗೆ ಬಾರದಿದ್ದಕ್ಕೆ ಜಯಪ್ಪನ ತಾಯಿ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪುತ್ರ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಫೆಬ್ರವರಿ 2 ರಂದು ಹಾಸನ ಹೊರವಲಯದ ಬುಸ್ತೇನಹಳ್ಳಿ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಜಯಪ್ಪನ ಮೃತ ದೇಹ ಪತ್ತೆಯಾಗಿತ್ತು. ಪೊಲೀಸರು ಕೊಲೆ ಪ್ರಕರಣದ ತನಿಖೆ ನಡೆಸಿದಾಗ ಹತ್ಯೆ ರಹಸ್ಯ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿ ಅಣ್ಣಯ್ಯನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.