ಇತ್ತೀಚಿನ ಸುದ್ದಿರಾಜಕೀಯರಾಜ್ಯ

ಹೊಸ ಕಡ್ಡಾಯ ಗ್ರಾಚ್ಯುಟಿ ಮಸೂದೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು, ಫೆಬ್ರವರಿ 02: ರಾಜ್ಯ ಸರ್ಕಾರವು ಶೀಘ್ರದಲ್ಲೇ ಕಡ್ಡಾಯ ಹೊಸ ಗ್ರಾಚ್ಯುಟಿ ಮಸೂದೆಯನ್ನು ಜಾರಿಗೆ ತರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ರಾಚ್ಯುಟಿ ಯೋಜನೆಯಡಿ, ಕಂಪನಿ ಅಥವಾ ಉದ್ಯೋಗ ನೀಡುವವರು ಗ್ರಾಚ್ಯುಟಿ ಮೊತ್ತವನ್ನು ವಿಮಾ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ಇದರಿಂದ ಕಂಪನಿಯು ದಿವಾಳಿಯಾದರೂ ಸಹ ಉದ್ಯೋಗಿಗಳು ತಮ್ಮ ಗ್ರಾಚ್ಯುಟಿ ಮೊತ್ತವನ್ನು ಪಡೆಯಬಹುದಾಗಿದೆ. ಒಮ್ಮೆ ಮಸೂದೆ ಅಂಗೀಕಾರವಾದರೆ ರಾಜ್ಯದಾದ್ಯಂತ ಸುಮಾರು 80 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಅಸಂಘಟಿತ ಕಾರ್ಮಿಕರಿಗೆ ಕಾರ್ಪಸ್ ನಿಧಿ

ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂಪಾಯಿ ಸೆಸ್ ವಿಧಿಸುವ ಮೂಲಕ ಅಸಂಘಟಿತ ಕಾರ್ಮಿಕರಿಗಾಗಿ ಕಾರ್ಪಸ್ ಫಂಡ್ ಸ್ಥಾಪಿಸುವ ಯೋಜನೆಯೂ ಇದೆ. ಇದರಿಂದ ಈ ಕಾರ್ಮಿಕರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದರು.

ಈ ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸುವ ಅಸಂಘಟಿತ ಕಾರ್ಮಿಕರ ವಯೋಮಿತಿಯನ್ನು 70 ವರ್ಷಗಳಿಗೆ ವಿಸ್ತರಿಸಲಾಗುವುದು. ಖಾಸಗಿ ವಲಯದಲ್ಲಿ ಅಂಗವಿಕಲರಿಗೆ 5 ಪ್ರತಿಶತ ಮೀಸಲಾತಿಯನ್ನು ಶಿಫಾರಸು ಮಾಡುವ ಮಸೂದೆಯನ್ನು ಜಾರಿಗೆ ತರಲು ಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಆಟೋರಿಕ್ಷಾ ಚಾಲಕರು, ಮೆಕ್ಯಾನಿಕ್‌ಗಳು, ಗ್ಯಾರೇಜ್ ಮಾಲೀಕರು ಸೇರಿದಂತೆ ಸಾರಿಗೆ ಇಲಾಖೆಯಲ್ಲಿರುವ ಸುಮಾರು 40 ಲಕ್ಷ ಅಸಂಘಟಿತ ಕಾರ್ಮಿಕರನ್ನು ಈ ಶ್ರಮ್ ಯೋಜನೆಯಡಿ ತರಲು ನಾವು ಚಿಂತನೆ ನಡೆಸಿದ್ದೇವೆ. ಶೇ 11ರ ಸಾರಿಗೆ ಸೆಸ್ ಅಡಿಯಲ್ಲಿ ಸುಮಾರು 250 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಹೀಗಾಗಿ ಈ ವಲಯದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ ಎಂದರು.

ರಾಜ್ಯದಲ್ಲಿ 394 ವಲಯಗಳಲ್ಲಿ ಒಂದು ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಈ ಶ್ರಾಮ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಪತ್ರಿಕೆ ವಿತರಕರು, ಛಾಯಾಗ್ರಾಹಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು, ಸಿನಿಮಾ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಸೇರಿದಂತೆ ಇತರೆ 10 ವೃತ್ತಿಯಲ್ಲಿರುವ ಅಸಂಘಟಿತ ಕಾರ್ಮಿಕರನ್ನೂ ಯೋಜನೆಯಡಿ ಸೇರಿಸಲಾಗುವುದು ಎಂದು ಬರವಸೆ ನೀಡಿದರು.

40,000 ಪತ್ರಿಕೆ ವಿತರಕರ ಪೈಕಿ ಕೇವಲ 5,000 ಈ ಶ್ರಮ್ ಅಡಿಯಲ್ಲಿ ನೋಂದಾಯಿಸಿದ್ದಾರೆ. ಹೀಗಾಗಿ ಹೆಚ್ಚಿನ ಜನರು ಯೋಜನೆಗೆ ನೋಂದಾಯಿಸುಕೊಳ್ಳುವಂತೆ ಕಾರ್ಮಿಕ ಆಯುಕ್ತ ಎಚ್.ಎನ್.ಗೋಪಾಲಕೃಷ್ಣ ಅವರು ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button