ದಾವಣಗೆರೆ: ದಿಢೀರ್ ಕುಸಿದ ಈರುಳ್ಳಿ ಬೆಲೆ, ರೈತರು ಕಂಗಾಲು
ದಾವಣಗೆರೆ, ಜನವರಿ 26: ಕೆಲವು ತಿಂಗಳ ಹಿಂದೆ ಬೆಲೆ ಏರಿಕೆ ಮೂಲಕ ಗ್ರಾಹಕರನ್ನು ಕಂಗಾಲಾಗಿಸಿದ್ದ ಈರುಳ್ಳಿ ಇದೀಗ ಬೆಲೆ ಕುಸಿತದ ಮೂಲಕ ರೈತರು ಕಣ್ಣೀರು ಹಾಕುವಂತೆ ಮಾಡಿದೆ. ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿದ್ದು, ಸಣ್ಣ ಗಾತ್ರದ ಈರುಳ್ಳಿಗೆ ಕೆಜಿಗೆ ಒಂದು ರೂಪಾಯಿಗೆ ಇಳಿಕೆಯಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ ಎಪಿಎಂಸಿಯಲ್ಲಿ 31 ಲಾರಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಸುಮಾರು 6200 ಚೀಲ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಈರುಳ್ಳಿಗೆ ಗರಿಷ್ಠ ದರ 1400 ರೂಪಾಯಿ ಇದೆ.
ಅತ್ಯುತ್ತಮ ದಪ್ಪ ಈರುಳ್ಳಿಗೆ 1200 – 1300 ರೂಪಾಯಿ ಇದೆ. ಉತ್ತಮ ದಪ್ಪ ಈರುಳ್ಳಿಗೆ 1000 – 1100 ರೂ. ಇದೆ. ಮಧ್ಯಮ ಗಾತ್ರದ ಈರುಳ್ಳಿಗೆ 600 – 800 ರೂ, ಸಣ್ಣ ಗಾತ್ರದ ಈರುಳ್ಳಿಗೆ 100 ರಿಂದ 300 ರೂ. ದರ ಇದೆ.
ಬೆಲೆ ಕುಸಿತದಿಂದಾಗಿ ಬೇಸತ್ತ ರೈತರು ಜಮೀನಿನಲ್ಲಿಯೇ ಈರುಳ್ಳಿ ಬಿಡಲು ನಿರ್ಧಿಸಿದ್ದಾರೆ. ಸಾರಿಗೆ ವೆಚ್ಚ ಸಹ ಸಿಗದ ಸ್ಥಿತಿ ಇರುವುದರಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸುವುದೇ ವ್ಯರ್ಥ. ಹೀಗಾಗಿ ಹೊಲದಲ್ಲಿಯೇ ಬಿಡುವುದು ಉತ್ತಮ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಈರುಳ್ಳಿ ಬೆಲೆ ಕೆಜಿಗೆ ಸುಮಾರು 80 ರೂಪಾಯಿ ತಲುಪಿತ್ತು. ಪರಿಣಾಮವಾಗಿ ಗ್ರಾಹಕರು ಕಣ್ಣೀರುಹಾಕುವಂತಾಗಿತ್ತು. ನಂತರ ಸರ್ಕಾರ ಕೂಡ ಈರುಳ್ಳಿ ಬೆಲೆ ಇಳಿಕೆಗೆ ಮಧ್ಯ ಪ್ರವೇಶ ಮಾಡಿ ಹಲವು ಕ್ರಮ ಕೈಗೊಂಡಿತ್ತು. ಈರುಳ್ಳಿ ಬೆಲೆ ಹೆಚ್ಚಳವಾದ ಕಾರಣ ಕೇಂದ್ರ ಸರ್ಕಾರ ಕೂಡ ಎರಡು ಎನ್ಸಿಸಿಎಫ್ ಹಾಗೂ ಎನ್ಎಎಎಫ್ಡಿ ಜೊತೆ ಸೇರಿ ಜನರಿಗೆ ಅನಕೂಲ ಆಗಲಿ ಎನ್ನುವ ಕಾರಣಕ್ಕೆ ಈರುಳ್ಳಿಯನ್ನು ಸಬ್ಸಿಡಿ ಮೂಲಕ ವಿತರಣೆ ಮಾಡಿತ್ತು. ಇದೀಗ ಈರುಳ್ಳಿ ಬೆಲೆ ತೀವ್ರ ಕುಸಿತದಿಂದ ರೈತರು ಕಂಗಾಲಾಗಿದ್ದು, ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸಬೇಕಿದೆ.