ಅತೃಪ್ತಿ ಶಮನಕ್ಕೆ ಕೊಡುತ್ತೇವೆ ಎಂದಿದ್ದ 25 ಕೋಟಿ ಅನುದಾನ ಎಲ್ಲಿ: ಕಾಂಗ್ರೆಸ್ ಸರ್ಕಾರಕ್ಕೆ ಬೊಮ್ಮಾಯಿ ಪ್ರಶ್ನೆ
ಅತೃಪ್ತಿ ಶಮನಕ್ಕೆ 25 ಕೋಟಿ ರೂಪಾಯಿ ಅನುದಾನ ಕೊಡುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಅನುದಾನ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಟ್ಟರೆ, ನಮ್ಮ ಶಾಸಕರಿಗೂ ಕೊಡಬೇಕು. ನಾನು ಸಿಎಂ ಆಗಿದ್ದಾಗ 25 ಕೋಟಿ ರೂ. ಅನುದಾನವನ್ನು ಕೊಟ್ಟಿದ್ದೇನೆ. ಹಾಗಾದರೆ ಇವರು ಈಗ ಎಷ್ಟು ಕೊಡಬೇಕು ಕಾಂಗ್ರೆಸ್ ಶಾಸಕರಿಗೆ? ಇವರ ಯೋಗ್ಯತೆಗೆ ಸಣ್ಣ ಬೋರ್ವೆಲ್ ಹಾಕಿಲ್ಲ ಎಂದು ಟೀಕಿಸಿದರು.
ಎಲ್ಲಾ ವಿಚಾರಗಳಲ್ಲಿಯೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅನುದಾನದ ಬಗ್ಗೆ ಕೇಂದ್ರದವರು ಚರ್ಚೆಗೆ ಬರಲಿ ಎಂಬ ಸವಾಲು ಹಾಕುತ್ತಾರೆ. ಅದು ಆಗದ ವಿಚಾರ ಎಂಬುದು ಅವರಿಗೆ ಗೊತ್ತಿದೆ. ಅದಕ್ಕೇ ಹಾಗೆ ಹೇಳುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಯತೀಂದ್ರ ಹೇಳಿಕೆಯ ಅರ್ಥವೇನು: ಬೊಮ್ಮಾಯಿ ಪ್ರಶ್ನೆ
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಡಾ. ಯತೀಂದ್ರ ಹೇಳಿರುವುದರ ಅರ್ಥವೇನು ಎಂದು ಬೊಮ್ಮಾಯಿ ಪ್ರಶ್ನಿಸಿದರು. ಹೆಚ್ಚು ಸೀಟು ಬಂದರೆ ಸಿಎಂ ಆಗಿ ಮುಂದುವಯಲಿದ್ದಾರೆ ಎಂದಿದ್ದಾರೆ. ಹಾಗಾದರೆ ಕಾಂಗ್ರೆಸ್ಗೆ ಕಡಿಮೆ ಸೀಟು ಬಂದರೆ ಏನು? ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಬರುವುದು ಬಿಜೆಪಿಗೆ. ಹಾಗಾದರೆ ಯತೀಂದ್ರ ಪ್ರಕಾರ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದಿಲ್ಲವೇ? ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಿಂದ ಈಗ ಈ ಪ್ರಶ್ನೆ ಉದ್ಭವಿಸಿದೆ. ಅದಕ್ಕೆ ಚುನಾವಣೆ ಬಂದಾಗ ಈ ರೀತಿ ವಿತಂಡವಾದ ಮುಂದಿಡುತ್ತಾರೆ ಎಂದು ಬೊಮ್ಮಾಯಿ ಟೀಕಿಸಿದರು.
ರೈತರಿಗಾಗಿ ರಾಜ್ಯದ ಬೊಕ್ಕಸದಿಂದ ಒಂದು ಪೈಸೆ ಖರ್ಚು ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ದುಪ್ಪಟ್ಟು ಪರಿಹಾರ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಸಿದರು.
ಕಾನೂನು ಸುವ್ಯವಸ್ಥೆಯಲ್ಲಿ ರಾಜಕಾರಣ ಮಧ್ಯಪ್ರವೇಶ: ಬೊಮ್ಮಾಯಿ ಆರೋಪ
ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ಮಹಿಳೆ ಮೇಲೆ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿ ಹಾನಗಲ್ ಠಾಣೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆಯಲ್ಲಿ ರಾಜಕಾರಣ ಮಧ್ಯಪ್ರವೇಶ ಮಾಡುತ್ತಿದೆ. ಪೋಕ್ಸೊ ಕಾಯ್ದೆ ಉಲ್ಲಂಘನೆ ಮಾಡಿದ್ದಲ್ಲದೆ ಸಂತ್ರಸ್ತೆಗೆ ಆಮಿಷವೊಡ್ಡಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುವಂತಹ ಎಲ್ಲಾ ಸಾಧ್ಯತೆಗಳಿವೆ. ಎಸ್ಐಟಿ ತನಿಖೆಗೆ ಸಿಎಂ ನಿರಾಕರಿಸಿ ಪ್ರೋತ್ಸಾಹ ಮಾಡಿದಂತೆ ಮಾಡಿದ್ದಾರೆ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಜನವರಿ 20ರಂದು ಹಾವೇರಿ ಎಸ್ಪಿ ಕಚೇರಿ ಮುಂದೆ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ ಎಂದೂ ಅವರು ತಿಳಿಸಿದರು.
ಟೀಕಿಸುವಾಗ ಏಕವಚನ ಸಲ್ಲ: ಬೊಮ್ಮಾಯಿ
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಟೀಕೆ ಮಾಡುವಾಗ ಏಕವಚನದಲ್ಲಿ ಇರದಂತೆ ಎಚ್ಚರಿಕೆ ವಹಿಸಬೇಕು. ಸಿಎಂ ಸಿದ್ದರಾಮಯ್ಯ ಕೂಡ ಹಲವು ವರ್ಷಗಳಿಂದ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಅವರು ಮಾತನಾಡಿದರೆ ಸರಿ, ಬೇರೆಯವರು ಮಾತನಾಡಿದರೆ ತಪ್ಪು. ಇದಕ್ಕೆ ಮೊದಲು ಸಿದ್ದರಾಮಯ್ಯ ಉತ್ತರ ಕೊಡಲಿ ಎಂದು ಹೇಳಿದರು.