ಅನಂತ್ ಕುಮಾರ್ ಹೆಗಡೆ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಪಕ್ಷ ಹೇಳಿದ್ರೆ ನಾನು ಅವರ ವಿರುದ್ಧ ಸ್ಪರ್ಧಿಸಲು ಸಿದ್ಧ -ಭೀಮಣ್ಣ ನಾಯ್ಕ್
ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ಮತ್ತೊಂದು ಮಗ್ಗಲು ಹೊರಳುತ್ತಿದೆ. ಹೆಜ್ಜೆ ಹೆಜ್ಜೆಗೂ ಎದುರಾಳಿಗಳ ಎದೆಚುಚ್ಚುವಂತೆ ಮಾತಿನ ಬಾಣಗಳು ಅತ್ತಿಂದಿತ್ತ ಇತ್ತಿಂದತ್ತ ಶರವೇಗದಲ್ಲಿ ಹೋಗ್ತಿವೆ. ರಾಮಮಂದಿರ ವಿಚಾರವಾಗಿ ಮಾತನಾಡುತ್ತಿದ್ದಾಗ ಸಂಸದ ಅನಂತಕುಮಾರ್ ಆಡಿದ ಮಾತು ಕಾಂಗ್ರೆಸ್ಸಿಗರನ್ನ ಕೆರಳುವಂತೆ ಮಾಡಿದೆ. ಹೀಗಾಗಿಯೇ ಕೈ ನಾಯಕರು ಹೋದಲ್ಲಿ ಬಂದಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅನಂತಕುಮಾರ್ ಹೆಗಡೆ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಎಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಶಾಸಕ ಭೀಮಣ್ಣ ನಾಯ್ಕ್ಪ್ರ ಪ್ರಶ್ನೆ ಮಾಡಿದ್ದಾರೆ.
ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅನಂತ್ ಕುಮಾತ್ ಹೆಗಡೆ ಸಂಸದರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಗುಡ್ಡ ಕಾಡು ಪ್ರದೇಶ ಹೊಂದಿರುವ ನಮ್ಮ ಜಿಲ್ಲೆಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತರಬೇಕಿತ್ತು. ಸಿದ್ದರಾಮಯ್ಯ ಸರ್ಕಾರವನ್ನು ಎದುರಿಸುವುದಕ್ಕೆ ಬಿಜೆಪಿಯವರಿಗೆ ಆಗುತ್ತಿಲ್ಲ. ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತಂದ ಬಳಿಕ ಬಿಜೆಪಿ ನಮ್ಮನ್ನ ಎದುರಿಸೊಕೆ ಆಗುತ್ತಿಲ್ಲ. ಎದುರಿಸೊಕೆ ಆಗದಿದ್ದಾಗ ಇಂತಹ ಮಾತುಗಳು ಬರೊದು ಸಹಜ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಲ್ಲ ಸಲ್ಲದ ಹೇಳಿಕೆ ಕೊಡುವಂತಹದ್ದು, ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳುವಂತಹದ್ದು, ಅನೇಕ ಸೈನಿಕರನ್ನು ಕೊಂದು ಚುನಾವಣೆ ಮಾಡಿರುವಂತ ಬಿಜೆಪಿಯವರು ಇವರು.
ಪೆರೆಶ್ ಮೆಸ್ತಾ ವಿಷಯ ಇಟ್ಕೊಂಡು ಇಡೀ ಜಿಲ್ಲೆಯಲ್ಲಿ ದಂಗೆ ಎಬ್ಬಿಸಿದ್ರು
ವಿಧಾನಸಭೆ ಚುನಾವಣೆಯಲ್ಲಿ ಪೆರೆಶ ಮೆಸ್ತಾ ಸಾವಿನ ಹಿನ್ನಲೆ ಇಟ್ಕೊಂಡು ಬಿಜೆಪಿಯವರು ಚುನಾವಣೆ ಮಾಡಿದ್ರು. ಪೆರೆಶ್ ಮೆಸ್ತಾ ವಿಷಯ ಇಟ್ಕೊಂಡು ಇಡೀ ಜಿಲ್ಲೆಯಲ್ಲಿ ದಂಗೆ ಎಬ್ಬಿಸಿದ್ರು. ಅನೇಕ ಕಡೆ ಬೆಂಕಿ ಹಾಕಿ ಗಲಭೆ ಸೃಷ್ಟಿ ಮಾಡಿಸಿದ್ರು. ಅವರದೆ ಸರ್ಕಾರದ ಪೊಲೀಸರಿಂದ ತನಿಖೆ ಆದಾಗ ಸಹಜ ಸಾವು ಎಂದು ವರದಿ ಬಂತು. ಸಹಜ ಸಾವು ಎಂಬ ವರದಿ ಬಂದ ಬಳಿಕ ಪೆರೆಷ ಮೆಸ್ತಾ ಮನೆಯವರನ್ನ ಇವರು ನೋಡಿದ್ರಾ? ಗಲಭೆ ಮಾಡಿದ ಅನೇಕ ಯುವಕರ ಮೇಲೆ ಹಾಕಿರುವ ಕೇಸ್ ಗಳ ಬಗ್ಗೆ ಯೋಚನೆ ಮಾಡಿದ್ರಾ? ಅನೇಕರು ಇವತ್ತಿಗೂ ಕೋರ್ಟ್, ಕಚೇರಿ ಅಂತಾ ಅಲೆದಾಡುತ್ತಿದ್ದಾರೆ. ಅವರ ಬೈಕ್ಗಳನ್ನು ಬಿಡಿಸಿಕೊಳ್ಳುವ ಕೆಲಸ ಕೂಡ ಬಿಜೆಪಿಯವರು ಮಾಡಲಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಅಧಿಕಾರಕ್ಕೆ ಬರಲು ಸಮಯಕ್ಕೆ ತಕ್ಕಂತೆ ಹಿಂದೂತ್ವ ಬಳಸಿಕೊಳ್ಳುತ್ತಾರೆ. ಚುನಾವಣೆ ಸಮೀಪ ಇದ್ದಾಗ ಹಿಂದುತ್ವದ ಬಗ್ಗೆ ಎಲ್ಲಿಲ್ಲದ ಅಭಿಮಾನ ಬರುತ್ತೆ. ಯಾಕೆ ನಾವು ಹಿಂದೂ ಅಲ್ವಾ? ಹಿಂದೂ ಧರ್ಮ ಕಾಪಾಡುವುದು ಈ ದೇಶದ ಪ್ರತಿಯೊಬ್ಬರ ಕರ್ತವ್ಯ. ಈ ದೇಶದ ಪ್ರತಿಯೊಬ್ಬರೂ ಹಿಂದೂ ಧರ್ಮ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ನಾನೂ ಕೂಡ ಹೌದು. ನಮ್ಮ ಪಕ್ಷ ಮಾಡುವ ತಿರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಅನಂತಕುಮಾರ್ ಹೆಗಡೆ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧ
ಇನ್ನು ಇದೇ ವೇಳೆ ಶಾಸಕ ಭೀಮಣ್ಣ ನಾಯ್ಕ್ ಅವರು ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದ್ದಾರೆ. ನನಗೆ ಲೋಕಸಭೆಗೆ ಸ್ಪರ್ದಿಸುವಂತೆ ಸೂಚಿಸಿದ್ರೆ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧ. ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಬಿಜೆಪಿಯವರಿಗೆ ಶರಣಾಗಿದ್ದೇನೆ ಎಂಬುದು ಉಹಾಪೋಹ. ಇವತ್ತೇ ಶಾಸಕ ಸ್ಥಾನ ಬಿಟ್ಟು ಲೋಕಸಭೆಗೆ ಸ್ಪರ್ಧಿಸಲು ಸೂಚಿಸಿದ್ರೆ ನಾನು ರೆಡಿ. 3 ಚುನಾವಣೆಯಲ್ಲಿ ನಾನು ಸೋತರೂ ಪಕ್ಷ ಸಂಘಟನೆ ಮಾಡಿದ್ದೇನೆ ಎಂದರು.