5 ದಿನದಿಂದ ನಾಪತ್ತೆಯಾಗಿದ್ದ ಮಹಿಳೆ ದರ್ಗಾ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆ, ಕೊಲೆ ಆಗಿದ್ದೇಕೆ?
ಆ ಕುಟುಂಬಸ್ಥರು ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಮನೆ ಒಡತಿ ಸಿಗಲಿ ಅಂತ ಆ ದರ್ಗಾ ಬಳಿ ಹೋಗಿ ಪ್ರಾರ್ಥನೆ ಮಾಡ್ತಿದ್ರು. ಜೊತೆಗೆ ಇಂದಲ್ಲ ನಾಳೆ ಮನೆಗೆ ಬಂದೆ ಬರ್ತಾಳೆ ಅನ್ನೂ ನಂಬಿಕೆಯಲ್ಲಿಯೂ ಇದ್ರು. ಜೊತೆಗೆ ಕುಟುಂಬಸ್ಥರ ನಂಬಿಕೆಯಂತೆ ನಾಪತ್ತೆಯಾದ 5 ದಿನಗಳ ಬಳಿಕ ಮನೆ ಒಡತಿ ದರ್ಗಾ ಬಳಿ ಸಿಕ್ಕಿದ್ದು ಮಹಿಳೆಯ ಸ್ಥಿತಿ ಕಂಡು ಕುಟುಂಬಸ್ಥರ ಜೊತೆಗೆ ಗ್ರಾಮಸ್ಥರು ಸಹ ಬೆಚ್ಚಿ ಬಿದ್ದಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.
ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ ಪೂಜೆ ಪುನಸ್ಕಾರದಿಂದ ತುಂಬಿರಬೇಕಿದ್ದ ದರ್ಗಾದಿಂದ ಕೂದಲಳತೆ ಅಂತರದಲ್ಲೆ ಗ್ರಾಮದ ಮಹಿಳೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ. ಎಲ್ಲೋ ಹೋಗಿರ್ತಾಳೆ ಬರ್ತಾಳೆ ಅಂತ ಎಲ್ಲೆಡೆ ಹುಡುಕಾಡಿದ್ದ ಕುಟುಂಬಸ್ಥರು ಮನೆ ಒಡತಿಯ ದುರಂತ ಅಂತ್ಯ ಕಂಡು ಒಂದು ಕ್ಷಣ ಶಾಕ್ ಆಗಿದ್ದು ಎಲ್ಲರೂ ಮೌನಕ್ಕೆ ಜಾರಿದ್ದಾರೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ಭೀಕರವಾಗಿ ಕೊಲೆಯಾಗಿರುವ ಮಹಿಳೆ ಫಾತಿಮಾ.
ಹೌದು ಅಂದಹಾಗೆ ಫಾತಿಮಾ ಅನ್ನೂ 50 ವರ್ಷದ ಈ ಮಹಿಳೆ ಕುಟುಂಬಕ್ಕೆ ಅಸರೆಯಾಗೋಕ್ಕೆ ಅಂತ ಗಾರ್ಮೆಂಟ್ಸ್ ಒಂದಕ್ಕೆ ಕೆಲಸಕ್ಕೆ ಹೋಗ್ತಿದ್ದು, ನಿತ್ಯ ಸಂಜೆ ಮನೆಗೆ ವಾಪಸ್ ಆಗ್ತಿದ್ಲು. ಆದ್ರೆ ನಿತ್ಯ ವಾಪಸ್ ಬರ್ತಿದ್ದ ಮಹಿಳೆ ಕಳೆದ 5ನೇ ತಾರೀಕು ಕೆಲಸಕ್ಕೆ ಹೋಗಿದ್ದವಳು ಸಂಜೆ ಸಂಬಂಧಿಯ ಜೊತೆ ಗ್ರಾಮದ ಗೇಟ್ ಗೆ ಬಂದಿದ್ದರೂ ಮನೆಗೆ ಮಾತ್ರ ವಾಪಸ್ ಆಗಿರಲಿಲ್ಲ.
ಹೀಗಾಗಿ ಎಲ್ಲೆಡೆ ಮಹಿಳೆಗಾಗಿ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಎಲ್ಲೂ ಕಾಣದಿದ್ದಾಗ ಆತಂಕಕ್ಕೀಡಾಗಿ ನಂದಗುಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ರು. ಆದ್ರೆ ದೂರು ದಾಖಲಾದ ಐದು ದಿನಗಳ ನಂತರ ಮಹಿಳೆ ಗ್ರಾಮದ ಹೊರ ವಲಯದಲ್ಲಿರುವ ದರ್ಗಾದ ಬಳಿ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬೆಳಗ್ಗೆ ಕುರಿಗಾಹಿಗಳು ನಾಯಿಗಳು ಕಚ್ಚುತ್ತಿದ್ದನ್ನ ಕಂಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ನೋಡಿದಾಗ ನಾಪತ್ತೆಯಾಗಿದ್ದ ಫಾತಿಮಾ ಶವವಾಗಿ ಪತ್ತೆಯಾಗಿದ್ದಾಳೆ.
ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹೊಡೆದು ಭೀಕರವಾಗಿ ಫಾತಿಮಾಳನ್ನ ಕೊಲೆ ಮಾಡಿದ್ದು ಮುಖ ಸಹ ಗುರುತು ಸಿಗದಂತೆ ಮಹಿಳೆಯ ಮೃತದೇಹವನ್ನ ಹೊಡೆದು ಕೊಲೆ ಮಾಡಿದ್ದಾರೆ. ಜೊತೆಗೆ ಕೊಲೆ ಮಾಡಿದ ನಂತರ ಮೃತದೇಹ ಯಾರಿಗೂ ಕಾಣದಂತೆ ಅದರ ಮೇಲೆ ಗಿಡ ಗಂಟಿಗಳನ್ನ ಹಾಕಿ ಮುಚ್ಚಿ ಹಾಕಿದ್ದು ನಿನ್ನೆ ಬುಧವಾರ ನಾಯಿಗಳಿಂದ ಮೃತದೇಹ ಹೊರಗಡೆ ಬಂದಿದೆ.
ಅಲ್ಲದೆ ಮೇಲ್ನೂಟಕ್ಕೆ ಮೃತ ಫಾತಿಮಾಗೆ ಯಾವುದೇ ಶತ್ರುಗಳು ಇಲ್ಲ. ಕಳೆದ ತಿಂಗಳ ಸಂಬಳ ವಿಚಾರವಾಗಿ ಗಾರ್ಮೆಂಟ್ಸ್ ನಲ್ಲಿ ಜಗಳ ನಡೆದಿದ್ದಾಗಿ ಮನೆಯವರ ಬಳಿ ಹೇಳಿಕೊಂಡಿದ್ಲಂತೆ. ಇದಾದ ನಂತರ ಆಕೆ ಶವವಾಗಿ ಪತ್ತೆಯಾಗಿದ್ದು ಯಾರೊ ದ್ವೇಷದಿಂದಲೆ ಕೊಲೆ ಮಾಡಿರುವ ಶಂಕೆಯನ್ನ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಂದಗುಡಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ.
ಒಟ್ಟಾರೆ ಎಲ್ಲೋ ಹೋಗಿದ್ದಾಳೆ ಬರ್ತಾಳೆ ಅಂದುಕೊಂಡಿದ್ದ ಕುಟುಂಬಸ್ಥರಿಗೆ ಮಹಿಳೆ ಗ್ರಾಮದ ಹೊರವಲಯದಲ್ಲೆ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಇನ್ನು ಈ ಬಗ್ಗೆ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಪೊಲೀಸರ ತನಿಖೆಯಿಂದಷ್ಟೆ ಮಹಿಳೆಯ ಕೊಲೆ ರಹಸ್ಯ ಬೆಳಕಿಗೆ ಬರಬೇಕಿದೆ.