ಗುಜರಾತಿಗಳೇಕೆ ಹೆಚ್ಚು ಶ್ರೀಮಂತರು?
ಗುಜರಾತಿನ ಗಲ್ಲಿಯಲ್ಲಿ ಟೀ ಮಾರುವ ವ್ಯಕ್ತಿ, ಅಲ್ಲೆಲ್ಲೋ ಮೂಲೆಯಲ್ಲಿ ದೋಕ್ಲ, ಸಮೋಸ, ಕಚೋರಿ ಮಾಡುವ ವ್ಯಕ್ತಿ, ಇನ್ನ್ಯಾವುದೇ ಸಣ್ಣ ಪುಟ್ಟ ದುಕಾನ್ದಾರರನ ನೆಟ್ ವರ್ತ್ ಕೂಡ ಕೋಟಿಗೆ ಕಡಿಮೆ ಇರುವುದಿಲ್ಲ. ಅವರೇಕೆ ಹಾಗೆ? ಹೌದು ಗುಜರಾತಿಗಳು ಇರುವುದೇ ಹಾಗೆ. ಅವರು ಲೆಕ್ಕಾಚಾರದ ಜೊತೆಗೆ ಅತ್ಯಂತ ಪ್ರಾಕ್ಟಿಕಲ್ ಜನ. ಎಲ್ಲಿ ವ್ಯಾಪಾರ ವಹಿವಾಟು ನಡೆಯುವುದಿಲ್ಲ ಅಲ್ಲಿಂದ ಗೊಣಗದೆ ಎದ್ದು ನಡೆದು ಬಿಡುತ್ತಾರೆ. ಎಲ್ಲಿ ವ್ಯಾಪಾರವಿದೆ ಎನ್ನಿಸುತ್ತದೆ ಅಲ್ಲಿ ನೆಲೆಯೂರುತ್ತಾರೆ. ಭಾರತದ ನಾಲ್ಕನೇ ಅತಿ ದೊಡ್ಡ ಎಕಾನಮಿ ಹೊಂದಿರುವ ರಾಜ್ಯ ಎನ್ನುವ ಹೆಗ್ಗಳಿಕೆಯನ್ನ ಗುಜರಾತ್ ಪಡೆದುಕೊಂಡಿದೆ. ದೇಶದ ತಲಾದಾಯ ಒಂದು ಲಕ್ಷ ಎಪ್ಪತ್ತು ಸಾವಿರವಿದ್ದರೆ, ಗುಜರಾತ್ ತಲಾದಾಯ ಮೂರು ಲಕ್ಷ ಮುಟ್ಟಿದೆ. ವ್ಯಾಪಾರ ಮಾಡಲು ಅತ್ಯಂತ ಸುಲಭ ಎನ್ನುವ ಪಟ್ಟಿ ಅಡಿಯಲ್ಲಿ ಉತ್ತಮ ಸ್ಥಾನವನ್ನ ಪಡೆದುಕೊಂಡಿದೆ, ಅಲ್ಲದೆ ಅತಿ ಕಡಿಮೆ ನಿರುದ್ಯೋಗ ಹೊಂದಿರುವ ರಾಜ್ಯ ಎಂದು ಕೂಡ ಪ್ರಸಿದ್ಧವಾಗಿದೆ.ಗುಜರಾತಿಗಳು ವ್ಯಾಪಾರದ ವಿಷಯದಲ್ಲಿ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಮೊದಲೇ ಹೇಳಿದಂತೆ ಅವರನ್ನ ನಾವು ಆಡಿಕೊಂಡು ನಗಬಹುದು ಆದರೆ ಅವರ ಕಷ್ಟ ಸಹಿಷ್ಣುತೆ, ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಜಗ್ಗದೆ ನಿಂತು ಕಾರ್ಯ ಸಾಧಿಸುವ ಪರಿಯನ್ನ ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಅಂತಹ ಒಂದು ಗುಜರಾತಿ ಕುಟುಂಬದ ಕಥೆಯನ್ನ ಕೆಳಗಿನ ಸಾಲುಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಭಾರತದಲ್ಲಿ ಬರೋಬ್ಬರಿ 169 ಜನ ಬಿಲಿಯನೇರ್ಗಳಿದ್ದಾರೆ ಎಂದಿದೆ ಫೋರ್ಬ್ಸ್ ಪಟ್ಟಿ. ಕಳೆದ ವರ್ಷದ ಸಂಖ್ಯೆ 166, ಈ ವರ್ಷ ಮೂರು ಹೊಸ ಹೆಸರು ಸೇರಿಕೊಂಡಿದೆ. ಆಶ್ಚರ್ಯದ ವಿಷಯವೇನು ಗೊತ್ತೇ? 169 ಜನರಲ್ಲಿ 145 ಜನ ಬಿಲಿಯನೇರ್ಗಳು ಗುಜರಾತಿಗಳು! ಅವರ ವಾಸಸ್ಥಾನ, ಮುಂಬೈ, ಬೆಂಗಳೂರು, ದೆಹಲಿ, ಯಾವುದೇ ಇರಲಿ, ಆದರೆ ಅವರ ಮೂಲ ಗುಜರಾತ್. ನಾವು ಸೇಠು, ಮಾರ್ವಾಡಿ, ಗುಜ್ಜು ಭಾಯ್ ಇತ್ಯಾದಿಗಳನ್ನ ಹೇಳಿ ಅವರನ್ನ ಹಂಗಿಸಬಹುದು, ಅವರನ್ನ ಧನದಾಹಿಗಳು, ಕಂಜೂಸ್ ಎಂದೂ ಕರೆಯಬಹುದು. ಬೇಕಾದ್ದು ಅನ್ನಿ, ಅಡ್ಡಿಯಿಲ್ಲ, ಸದ್ಯಕ್ಕೆ ಭಾರತವನ್ನು ಮುನ್ನೆಡೆಸುತ್ತಿರುವವರು ಅವರೇ, ಒಪ್ಪುವುದು ಬಿಡುವುದು, ಇಷ್ಟವೋ ಇಲ್ಲವೋ ಅದು ಬೇರೆ ಮಾತು. ವಾಸ್ತವ ಮಾತ್ರ ಇರುವುದು ಹೀಗೆ.